ಫೆ.18 ರಿಂದ ದೇಶಾದ್ಯಂತ ಬಿಎಸ್‌ಎನ್‌ಎಲ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Update: 2019-02-12 12:45 GMT

ಬೆಂಗಳೂರು, ಫೆ.12: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ಫೆ.18 ರಿಂದ ಮೂರು ದಿನಗಳವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಬಿಎಸ್‌ಎನ್‌ಎಲ್ ನೌಕರರ ಸಂಘಟನೆ ತಿಳಿಸಿದೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಎ.ಸಿ. ಕೃಷ್ಣಾರೆಡ್ಡಿ ಮಾತನಾಡಿ, ಬಿಎಸ್‌ಎನ್‌ಎಲ್ ನೌಕರರ ಸಂಘಟನೆಗಳು, 4 ಜಿ ತರಂಗ ಗುಚ್ಛ ಹಂಚಿಕೆ, ಪಿಂಚಣಿ ಪಾವತಿಯಲ್ಲಿ ಸೂಕ್ತ ಪದ್ಧತಿ, ವೇತನ ಪರಿಷ್ಕರಣೆ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದು ತಿಳಿಸಿದರು.

ಕಳೆದ ಒಂದು ವರ್ಷದಿಂದ ಮುಷ್ಕರ ನಡೆಸುತ್ತಿದ್ದರೂ ಕೇಂದ್ರ ಸರಕಾರ ನಮ್ಮನ್ನು ನಿರ್ಲಕ್ಷಿಸುತ್ತಾ ಬಂದಿದೆ. ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಲ್ಲದೆ, ಬಿಎಸ್‌ಎನ್‌ಎಲ್ ಸೇರಿದಂತೆ ಇತರ ಸ್ಪರ್ಧಿಗಳನ್ನು ಕಣದಿಂದ ಹೊರ ತಳ್ಳುವುದೇ ರಿಲಯನ್ಸ್ ಜಿಯೋದ ಹುನ್ನಾರವಾಗಿದ್ದು, ಕೇಂದ್ರ ಸರಕಾರ ಪರೋಕ್ಷ ಸಹಕಾರ ನೀಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ರಿಲಯನ್ಸ್ ಜಿಯೋದ ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಈಗಾಗಲೇ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಟೆಲಿಕಾಂ ಸಂಸ್ಥೆಗಳು ತಮ್ಮ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಿವೆ. 2011-12 ನೇ ಸಾಲಿನಲ್ಲಿ 8,800 ಕೋಟಿ ರೂ. ನಷ್ಟದಲ್ಲಿದ್ದ ಬಿಎಸ್‌ಎನ್‌ಎಲ್, 2014-15 ನೇ ಸಾಲಿನಲ್ಲಿ 672 ಕೋಟಿ ರೂ. ಲಾಭ ದಾಖಲಿಸಿದೆ. 4 ಜಿ ಇಲ್ಲದೆ 2 ಜಿ, 3ಜಿ ಮೂಲಕವೇ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ ಎಂದು ಮಾಹಿತಿ ನೀಡಿದರು.

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ 4ಜಿ ಸೇವೆ ಒದಗಿಸಲು ತರಂಗ ಗುಚ್ಛಗಳನ್ನು ಬಿಎಸ್‌ಎನ್‌ಎಲ್ ಗೆ ಸರಕಾರ ನೀಡಿಲ್ಲ.

-ಎ.ಸಿ.ಕೃಷ್ಣಾರೆಡ್ಡಿ, ಬಿಎಸ್‌ಎನ್‌ಎಲ್ ನೌಕರರ ಸಂಘಟನೆಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News