ಕಾಂಗ್ರೆಸ್ ಬಲಪಡಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಶಾಸಕಿ ಸೌಮ್ಯಾ ರೆಡ್ಡಿ

Update: 2019-02-12 14:58 GMT

ಬೆಂಗಳೂರು, ಫೆ.12: ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದರು. 

ಮಂಗಳವಾರ ನಗರದಲ್ಲಿ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರುಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಆಗಮಿಸಿರುವುದು ಮಹಿಳೆಯರಲ್ಲಿ ಹುರುಪು, ಹುಮ್ಮಸ್ಸನ್ನು ಇಮ್ಮಡಿಗೊಳಿಸಿದಂತಾಗಿದೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುವಂತಹ ಜವಾಬ್ದಾರಿ ಮಹಿಳಾ ಕಾರ್ಯಕರ್ತರ ಮೇಲಿದೆ. ಇದನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾಅಮರನಾಥ್ ಮಾತನಾಡಿ, ಬಡತನದಲ್ಲಿದ್ದ ಸ್ವಾತಂತ್ರೋತ್ತರದಲ್ಲಿ ಆಧುನಿಕ ಭಾರತ ನಿರ್ಮಾಣ ಮಾಡಿದ ದಿವಂಗತ ಪ್ರಧಾನಿ ಇಂದಿರಾಗಾಂಧಿ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ಪ್ರಭಾವ ಪಕ್ಷದ ಮೇಲೆ ಗಟ್ಟಿಯಾಗಿ ಬೇರೂರಿದೆ. ಅವರನ್ನೆ ಮಾದರಿಯಾಗಿಟ್ಟುಕೊಂಡು ಕಾಂಗ್ರೆಸನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಚುನಾವಣೆಗೆ ಈಗಿನಿಂದಲೇ ಸಜ್ಜಾಗಿ, ಮತದಾರರನ್ನು ಮನವೊಲಿಸಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಮತ್ತಿತರ ಮುಖಂಡರು ಚುನಾವಣಾ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ, ದೇಶದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಇಂದಿರಾಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತಿತರ ಮಹಿಳಾ ಮುಖಂಡರು ಪಕ್ಷ ಸಂಘಟನೆಯಲ್ಲಿ ವಹಿಸಿದ ಪಾತ್ರ, ಭವಿಷ್ಯದಲ್ಲಿ ಮಹಿಳಾ ಕಾರ್ಯಕರ್ತರ ಪಡೆಯ ಜವಾಬ್ದಾರಿ ಕುರಿತು ಅರಿವು ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News