ಹಾಜರಾತಿ ಕೊರತೆಯಿಂದ ಹಾಲ್ ಟಿಕೆಟ್ ಕೊಡಲ್ಲ ಎಂದ ಶಾಲಾಡಳಿತ ಮಂಡಳಿ: ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ

Update: 2019-02-12 13:22 GMT

ಬೆಂಗಳೂರು, ಫೆ.12: ಕಡಿಮೆ ಹಾಜರಾತಿಯಿಂದ ಪರೀಕ್ಷೆಯ ಪ್ರವೇಶ ಪತ್ರ ಕೊಡಲು ಸಾಧ್ಯವಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದ ಕಾರಣದಿಂದಾಗಿ 10ನೇ ತರಗತಿ ವಿದ್ಯಾಥಿಯೋರ್ವ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ನಾಗವಾರಪಾಳ್ಯದ ಯಲ್ಲಮ್ಮ ದೇವಸ್ಥಾನ ಸ್ಟ್ರೀಟ್‌ನ ಜನಾರ್ಧನ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದು, ಈತ ಸ್ಥಳೀಯ ಸರಕಾರಿ ಶಾಲೆಯಲ್ಲಿ 10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಹಾಜರಾತಿ ಕಡಿಮೆ ಇದ್ದ ಕಾರಣ, ಎಸೆಸೆಲ್ಸಿ ಪರೀಕ್ಷೆಗೆ ಪ್ರವೇಶ ಪತ್ರ ಕೊಡಲು ಸಾಧ್ಯವಿಲ್ಲ ಎಂದು ಶಿಕ್ಷಕರು, ವಿದ್ಯಾರ್ಥಿಗೆ ಹೇಳಿ ಆತನ ತಾಯಿ ಶ್ರೀದೇವಿಯವರನ್ನು ಕರೆಸಿ, ವಾಸ್ತವ ಸಂಗತಿಯನ್ನು ತಿಳಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಇದರಿಂದ ನೊಂದ ಜನಾರ್ಧನ, ಮನೆಪಾಠಕ್ಕೆ(ಟ್ಯೂಷನ್) ಹೋಗುವುದಾಗಿ ಹೇಳಿ ತಿಗಣೆ ಔಷಧಿ ಕುಡಿದು, ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ. ಕೂಡಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News