×
Ad

ತಪ್ಪಾಗಿದೆ...ಇಲ್ಲಿಗೆ ಬಿಟ್ಟುಬಿಡಿ, ಸಿಟ್ ತನಿಖೆ ಬೇಡ: ಬಿಜೆಪಿ

Update: 2019-02-12 18:59 IST

ಬೆಂಗಳೂರು, ಫೆ. 12: ‘ಆಪರೇಷನ್ ಕಮಲ’ ಆಡಿಯೋ ತನಿಖೆ ವಿಚಾರ ‘ಸಿಟ್’ ತನಿಖೆಗೆ ಸ್ಪೀಕರ್ ರಮೇಶ್‌ ಕುಮಾರ್ ರೂಲಿಂಗ್ ನೀಡಿದ್ದು, ಅದನ್ನು ಪುನರ್ ಪರಿಶೀಲಿಸಬೇಕೆಂದು ವಿಪಕ್ಷ ಬಿಜೆಪಿ ಪಟ್ಟುಹಿಡಿದಿದ್ದರಿಂದ ಆರೋಪ-ಪ್ರತ್ಯಾರೋಪ, ಗದ್ದಲಕ್ಕೂ ಕಾರಣವಾಯಿತು.

ಮಂಗಳವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ರೂಲಿಂಗ್ ಮರು ಪರಿಶೀಲಸಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯ ಮಾಧುಸ್ವಾಮಿ, ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೇವೆ. ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಇಲ್ಲವೇ ಸದನ ಸಮಿತಿ ಅಥವಾ ಹಕ್ಕುಚ್ಯುತಿ ಸಮಿತಿಗೆ ಪ್ರಕರಣ ವಹಿಸಿ ಎಂದು ಆಗ್ರಹಿಸಿದರು.

ಬಳಿಕ ಮಾತು ಮುಂದುವರಿಸಿದ ಮಾಧುಸ್ವಾಮಿ, ‘ಸಿಟ್’ ತನಿಖೆಯಿಂದ ಸತ್ಯಾಂತ ಬೆಳಕಿಗೆ ಬರಲು ಸಾಧ್ಯವಿಲ್ಲ. ಇದರಿಂದ ಯಾವುದೇ ಉದ್ದೇಶ ಸಾಧನೆಯಾಗುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಸಿಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಎಂಗೆ ಇದೀಗ ಈಗ ವಿಶ್ವಾಸ ಮೂಡಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಇದು ಕ್ರಿಮಿನಲ್ ಪ್ರಕರಣವಲ್ಲ, ಕ್ರಿಮಿನಲ್ ಪ್ರಕರಣದಲ್ಲಿ ದೂರದಾರರು, ಎಫ್‌ಐಆರ್ ದಾಖಲಿಸಬೇಕು. ಆ ಬಳಿಕ ನ್ಯಾಯಾಂಗದ ಮುಂದೆ ಹೋಗಬೇಕು. ಸಿಟ್ ತನಿಖೆ ಆರಂಭವಾದರೆ ಅವರಿಗೆ ಮಾಹಿತಿ ನೀಡುವುದಾದರೂ ಯಾರು? ಸದನದಲ್ಲೇ ಇತ್ಯರ್ಥ ಮಾಡಿಕೊಳ್ಳಲಾಗದೆ ಕೋರ್ಟ್‌ಗೆ ಹೋಗುವುದು ಸರಿಯಲ್ಲ. ಶಾಸಕರನ್ನು ಪೊಲೀಸರಿಗೆ ಒಪ್ಪಿಸಬೇಡಿ. ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಲಿದೆ. ಅನಗತ್ಯವಾಗಿ ಬೇರೆಯವರಿಗೆ ಅಸ್ತ್ರ ನೀಡಬೇಡಿ. ಪೊಲೀಸರೊಂದಿಗೆ ಸ್ನೇಹ ಅಥವಾ ವೈರತ್ವ ಎರಡೂ ಒಳ್ಳೆಯದಲ್ಲ ಎಂದ ಅವರು, ಸಿಟ್ ತನಿಖೆಗೆ ಆದೇಶಿಸಿದರೆ ನಾವು ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ, ಆಡಿಯೋವನ್ನು ಬಿಡುಗಡೆ ಮಾಡಿದ ಸಿಎಂ ಉದ್ದೇಶವೇನಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಅವರು ಭಾಗಿ. ಹೀಗಿರುವಾಗ ಅವರ ಅಧೀನದ ಸಿಟ್ ತನಿಖೆಗೆ ಒಪ್ಪಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು ‘ಪ್ರಕರಣವನ್ನು ಹೊರ ತಂದಿದ್ದೆ ಮುಖ್ಯಮಂತ್ರಿ. ಅವರ ಮೇಲೆ ಆರೋಪ ಸಲ್ಲ’ ಎಂದು ಪ್ರತಿಕ್ರಿಯಿಸಿದ್ದರಿಂದ ಆಡಳಿತ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಏರಿದ ಧ್ವನಿಯಿಂದ ಮಾತಿನ ಚಕಮಕಿ, ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಸಚಿವ ದೇಶಪಾಂಡೆ ಪ್ರತಿಕ್ರಿಯಿಸಿ, ಆಡಿಯೋ ಪ್ರಕರಣ ಸಂಬಂಧ ಈಗಾಗಲೇ ಸ್ಪೀಕರ್ ರಮೇಶ್‌ ಕುಮಾರ್ ರೂಲಿಂಗ್ ನೀಡಿದ್ದು ಅದನ್ನು ಎಲ್ಲರೂ ಗೌರವಿಸಬೇಕು. ತಪ್ಪು ಮಾಡಿಲ್ಲವೆಂದರೆ ತನಿಖೆಯ ಭಯವೇಕೇ? ಸತ್ಯಾಂಶ ಬೆಳಕಿಗೆ ಬರಬೇಕು. ತನಿಖಾ ಸಂಸ್ಥೆಗಳ ಬಗ್ಗೆ ಅವಿಶ್ವಾಸ ಸಲ್ಲ ಎಂದು ಹೇಳಿದರು.

‘ರಾಜಕೀಯ ವ್ಯಕ್ತಿಗಳ ನಡವಳಿಯಿಂದ ಜನತೆ ಬೇಸತ್ತಿದ್ದಾರೆ. ಹೀಗಾಗಿ ಯಾವುದೇ ಮಗು ನಾನು ರಾಜಕಾರಣಿಯಾಗುತ್ತೇನೆಂದು ಹೇಳುವುದಿಲ್ಲ. ನಾವು ಅವರಿಗೆ ಸ್ಫೂರ್ತಿ ಆಗುವ ನೈತಿಕತೆ ಉಳಿಸಿಕೊಂಡಿದ್ದೇವೆಯೇ ?’

-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

‘ಸಿಟ್ ತನಿಖೆಯಿಂದ ದ್ವೇಷದ ರಾಜಕಾರಣಕ್ಕೆ ಅವಕಾಶವಾಗಲಿದೆ. ನಮ್ಮ ಪಕ್ಷದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ರವಿವಾರ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಪರಿಷತ್ ಸದಸ್ಯರೊಬ್ಬರು ಆಡಿಯೋ ಪ್ರಕರಣವನ್ನು ಸಿಟ್ ತನಿಖೆಗೆ ವಹಿಸುತ್ತೇವೆಂದು ಹೇಳಿದ್ದು, ಇದನ್ನು ನೋಡಿದರೆ ಮೊದಲೇ ತೀರ್ಮಾನವಾಗಿದೆ ಎಂಬುದು ಸ್ಪಷ್ಟ’

-ಸುರೇಶ್‌ ಕುಮಾರ್, ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News