ಆಡಿಯೋ ಪ್ರಕರಣದಲ್ಲಿ ಸಿದ್ದರಾಮಯ್ಯನವರನ್ನು ತನಿಖೆಗೆ ಒಳಪಡಿಸಬೇಕು: ಬಿ.ಶ್ರೀರಾಮುಲು

Update: 2019-02-12 14:06 GMT

ಬೆಂಗಳೂರು, ಫೆ. 12: ‘ಆಪರೇಷನ್ ಕಮಲ’ ಆಡಿಯೋ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ತನಿಖೆಗೆ ಒಳಪಡಿಸಬೇಕೆಂದು ಬಿಜೆಪಿ ಸದಸ್ಯ ಬಿ. ಶ್ರೀರಾಮುಲು ಆಗ್ರಹಿಸಿದ್ದು, ವಿಧಾನಸಭೆಯಲ್ಲಿ ಕೆಲಕಾಲ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.

ಮಂಗಳವಾರ ವಿಧಾನಸಭೆಯಲ್ಲಿ ಆಡಿಯೋ ಪ್ರಕರಣದ ತನಿಖೆ ವಿಚಾರದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀರಾಮುಲು, ಪ್ರಕರಣದ ತನಿಖೆಗೆ ವ್ಯಾಪ್ತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪಿಸಿದ ಸಚಿವರಾದ ಝಮೀರ್ ಅಹ್ಮದ್ ಖಾನ್, ವೆಂಕಟರಮಣಪ್ಪ ಅವರು ಸಿದ್ದರಾಮಯ್ಯರ ಹೆಸರು ಉಲ್ಲೇಖ ಸಲ್ಲ. ಯಾವ ಕಾರಣಕ್ಕಾಗಿ ಅವರನ್ನು ತನಿಖೆಗೆ ಒಳಪಡಿಸಬೇಕು. ಮನಸೋ ಇಚ್ಛೆ ಏನು ಬೇಕಾದರೂ ಮಾತನಾಡಬಹುದೇ, ಅವರೇನು ಗಣಿ ಲೂಟಿ ಮಾಡಿದ್ದಾರೇಯೇ? ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

ಇದರಿಂದ ಸದನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು. ಈ ಹಂತದಲ್ಲಿ ಎದ್ದುನಿಂತ ಬಿಜೆಪಿ ಸದಸ್ಯ ಈಶ್ವರಪ್ಪ, ‘ಕುಸ್ತಿ ಆಡಲು ಇಲ್ಲಿಗೆ ಬಂದಂತೆ ಕಾಣುತ್ತದೆ’ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಕೆರಳಿಸಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

ಕೂಡಲೇ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್‌ ಕುಮಾರ್, ‘ಝಮೀರ್ ನೀವೆಲ್ಲಾ ಮಂತ್ರಿಗಳಾಗಿರುವವರು. ನೀವೇ ಹೀಗೆ ತಾಳ್ಮೆ ಕಳೆದುಕೊಂಡರೇ ಹೇಗೆ? ನೀವು ಸ್ವಲ್ಪ ಮಸಾಲೆ ಪದಾರ್ಥಗಳನ್ನು ಕಡಿಮೆ ತಿನ್ನಬೇಕು’ ಎಂದು ಹಾಸ್ಯದ ಮೂಲಕ ಕಾವೇರಿದ ವಾತಾವರಣ ತಿಳಿಗೊಳಿಸಿದರು.

ಆರಂಭದಲ್ಲಿ ಮಾತನಾಡಿದ ಶ್ರೀರಾಮುಲು, ಒಬ್ಬ ಪ್ರಾಮಾಣಿಕ ರಾಜಕಾರಣಿ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಸ್ಪೀಕರ್ ಆಗಿರುವ ತಮ್ಮ ಹೆಸರನ್ನು ಸಿಎಂ ಕುಮಾರಸ್ವಾಮಿ ಹೊರತಂದಿರುವುದು ತಮ್ಮ ಘನತೆಗೆ ಧಕ್ಕೆ ಬರುವಂತಾಗಿದೆ. ಹೀಗಾಗಿ ‘ಸಿಟ್’ ತನಿಖೆ ಬದಲಿಗೆ ಸದನ ಸಮಿತಿ ರಚಿಸಿ ತನಿಖೆ ನಡೆಸಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News