ನಮ್ಮ ಶಾಸಕರ ಪುತ್ರನ ಜೊತೆ ಮಧ್ಯರಾತ್ರಿ ಚರ್ಚೆ ಮಾಡುವ ಅಗತ್ಯವೇನಿತ್ತು: ಕುಮಾರಸ್ವಾಮಿ ಪ್ರಶ್ನೆ

Update: 2019-02-12 14:15 GMT

ಬೆಂಗಳೂರು, ಫೆ. 12: ‘ಆಡಿಯೋವನ್ನು ನಾನು ಉದ್ದೇಶಪೂರ್ವಕವಾಗಿ ಮಾಡಿಸಿದ್ದಲ್ಲ, ನಮ್ಮ ಪಕ್ಷದ ಶಾಸಕ ನಾಗನಗೌಡ ಅವರ ಪುತ್ರನಿಗೆ ಇಪ್ಪತ್ತೈದು ಬಾರಿ ಕರೆ ಮಾಡಿ ಬಲವಂತವಾಗಿ ಶಾಸಕರ ಖರೀದಿಗೆ ಪ್ರಯತ್ನ ಮಾಡಿದ್ದೇಕೆ?’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಆಡಿಯೋ ಪ್ರಕರಣ ‘ಸಿಟ್’ ತನಿಖೆಗೆ ಒಪ್ಪದ ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸುದ್ದಿಗೋಷ್ಠಿಯಲ್ಲಿ ಆಡಿಯೋ ಮಾಡಿಸಿದ್ದು ನಾನೇ ಎಂದು ಹೇಳಿದ್ದೇನೆ. ಆದರೆ, ಅದರ ಹಿನ್ನೆಲೆಯನ್ನೂ ಅರ್ಥ ಮಾಡಿಕೊಳ್ಳಬೇಕು. ದೇವದುರ್ಗ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ನಾಯಕರು ನಮ್ಮ ಶಾಸಕರ ಪುತ್ರನಿಗೆ ಮಧ್ಯರಾತ್ರಿ 12 ಗಂಟೆಗೆ ಸುಮಾರು ವಿವಿಧ ಸಂಖ್ಯೆಗಳಿಂದ 25ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಆಗ ಆತ ನನ್ನನ್ನು ಸಂಪರ್ಕಿಸಿದ್ದ. ಹೋಗಿ ಬಾ ಎಂದು ನಾನೇ ಹೇಳಿದ್ದೆ. ಮಧ್ಯರಾತ್ರಿ ಅಲ್ಲಿ ಕುಳಿತು ಚರ್ಚೆ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ನಿನ್ನೆಯಿಂದ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ನಾನು ಯಾವುದೇ ಮಾತನಾಡದೆ ಮೌನವಾಗಿ ಕೇಳಿಸಿಕೊಂಡಿದ್ದೇನೆ. ಸರಕಾರದ ಮೇಲೆ ವಿಶ್ವಾಸವಿಲ್ಲ, ಸಿಟ್ ತನಿಖೆಯ ಮೇಲೆ ನಂಬಿಕೆ ಇಲ್ಲ. ದ್ವೇಷದ ರಾಜಕಾರಣ ನಡೆಯುತ್ತದೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ. ನಾನು ಚಕಾರ ಎತ್ತಲಿಲ್ಲ. ಎಂದಿಗೂ ನಾನು ದ್ವೇಷದ ರಾಜಕಾರಣ ಮಾಡಿದವನಲ್ಲ. ಈ ಹಿಂದೆ ಬಿಜೆಪಿ ಜೊತೆ ಸರಕಾರ ರಚಿಸಿದ ವೇಳೆ 2 ತಿಂಗಳಲ್ಲೆ ಬಿಜೆಪಿ ಪರಿಷತ್ ಸದಸ್ಯರು ನನ್ನ ವಿರುದ್ಧ 150 ಕೋಟಿ ರೂ.ಲಂಚದ ಆರೋಪ ಮಾಡಿದ್ದರು. ಸಚಿವರಾಗಿದ್ದ ಇನ್ನೊಬ್ಬ ವ್ಯಕ್ತಿ ನನ್ನ ವಿರುದ್ಧ ಕೊಲೆಯತ್ನದ ಆರೋಪ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಆ ವೇಳೆ ನಾನು ದ್ವೇಷದ ರಾಜಕಾರಣ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಂತದಲ್ಲಿ ತಮ್ಮ ಸ್ಥಾನದಲ್ಲೆ ಕೂತು ವಿಪಕ್ಷ ನಾಯಕ ಯಡಿಯೂರಪ್ಪ, ಪರಿಷತ್ ಸದಸ್ಯರನ್ನಾಗಿ ಮಾಡಲು ನಿಮ್ಮ ಪಕ್ಷದ ಕಾರ್ಯಕರ್ತರೊಬ್ಬರಿಂದ 25 ಕೋಟಿ ರೂ.ಕೇಳಿದ್ದು ಎಂದು ಪ್ರಸ್ತಾಪಿಸಿದಾಗ ಕೋಪಗೊಂಡ ಕುಮಾರಸ್ವಾಮಿ, ತಾನು ಆ ಆರೋಪವನ್ನೂ ಚರ್ಚೆ ಮಾಡಲು ಸಿದ್ಧ ಎಂದು ಸವಾಲು ಹಾಕಿದರು. ಯಾವುದೇ ಕಾರಣಕ್ಕೂ ನಾನು ಪಲಾಯನವಾದ ಮಾಡುತ್ತಿಲ್ಲ. 2014ರಲ್ಲಿ ನಡೆದ ಘಟನೆಯನ್ನು ಈಗ ಪ್ರಸ್ತಾಪಿಸಿ ಈಗಿನ ಆಡಿಯೋ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡುತ್ತಿರುವುದು ಸರಿಯಲ್ಲ. ಕೇಂದ್ರದಲ್ಲಿ ನಿಮ್ಮದೆ ಅಧಿಕಾರವಿದೆ ತನಿಖೆ ಮಾಡಿಸಿ ಎಂದರು.

ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತ ನಮ್ಮ ಮನೆಯಲ್ಲಿ ಚರ್ಚೆ ನಡೆಸಿದ್ದೇವೆ. ನೀವು ನಮ್ಮ ಪಕ್ಷದ ಶಾಸಕರ ಜೊತೆ ಮಾತನಾಡಿದ್ದೇಕೆ ? ನಮ್ಮದು ಪ್ರಾದೇಶಿಕ ಪಕ್ಷ. ಆದಾಯ ತೆರಿಗೆ ಕಟ್ಟುತ್ತಿದ್ದೇವೆ. ಎಲ್ಲ ಲೆಕ್ಕಪತ್ರಗಳನ್ನು ಇಟ್ಟಿದ್ದೇವೆ. ನೀವು ರಾಜಕೀಯ ಪಕ್ಷವಾಗಿ ಯಾವ ರೀತಿ ಮಾಡುತ್ತಿರೋ, ನಾವೂ ಅದನ್ನೇ ಮಾಡುತ್ತೇವೆ. ನಾನೇನು ವೈಯಕ್ತಿಕವಾಗಿ ಹಣ ಕೇಳಿಲ್ಲ ಎಂದು ಕುಮಾರಸ್ವಾಮಿ ಸಮರ್ಥಿಸಿದರು.

2014ರಲ್ಲಿ ನಡೆದಿದ್ದ ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದು ಅಪ್ರಸ್ತುತ. ಅಂದೇ ತನಿಖೆ ನಡೆಸಿ ಎಂದು ಆಗ್ರಹಿಸಿದೆ. ಆಗ ನೀವು ವಿಪಕ್ಷದಲ್ಲಿ ನಮ್ಮ ಪಕ್ಕದಲ್ಲೆ ಕೂತಿದ್ದೀರಿ. ಇಷ್ಟು ವರ್ಷಗಳ ಕಾಲ ಸುಮ್ಮನಿದಿದ್ದು ಏಕೆ ಎಂದ ಅವರು, ಮುಂಬೈನಲ್ಲಿ ನಮ್ಮ ಪಕ್ಷದ ಶಾಸಕ ನಾರಾಯಣಗೌಡರನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ದೂರಿದರು. ಇದರಿಂದ ಗದ್ದಲ ಸೃಷ್ಟಿಯಾಯಿತು. ಹೀಗಾಗಿ ಸದನವನ್ನು 15 ನಿಮಿಷ ಕಾಲ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News