ಉದ್ಯೋಗ ಖಾತ್ರಿ ಯೋಜನೆ: ಕೇಂದ್ರದಿಂದ ರಾಜ್ಯಕ್ಕೆ 2,049 ಕೋಟಿ ರೂ.ಬಂದಿಲ್ಲ- ಸಚಿವ ಕೃಷ್ಣಭೈರೇಗೌಡ

Update: 2019-02-12 14:28 GMT

ಬೆಂಗಳೂರು, ಫೆ.12: ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರದಿಂದ ರಾಜ್ಯಕ್ಕೆ 2,049 ಕೋಟಿ ರೂ.ಬಾಕಿ ಬರಬೇಕಾಗಿದೆ. ಕೂಲಿಕಾರರ ಹಿತದೃಷ್ಟಿಯಿಂದ ರಾಜ್ಯ ಸರಕಾರವೇ ಹಣ ಪಾವತಿ ಮಾಡಲು ಮುಂದಾಗಿದೆ ಎನ್ನುವ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರುಗಳ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲಕ್ಕೆ ವಿಧಾನ ಪರಿಷತ್ ವೇದಿಕೆಯಾಯಿತು. 

ಕಳೆದ ಸಾಲಿನಲ್ಲಿ 1,146 ಕೋಟಿ ರೂ.ಹಾಗೂ ಅದರ ಹಿಂದಿನ ವರ್ಷ 900 ಕೋಟಿ ರೂ.ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಾಕಿ ಬರುವುದೂ ಸೇರಿ ದೇಶಾದ್ಯಂತ 12,713 ಕೋಟಿ ರೂ.ಬಾಕಿ ಉಳಿದುಕೊಂಡಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿ ಮಾತಿನ ಚಕಮಕಿ, ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್‌ನ ಪ್ರಸನ್ನಕುಮಾರ್ ಪ್ರಶ್ನೆಗೆ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ, ಬಿಜೆಪಿಯ ಹಲವು ಸದಸ್ಯರು, ಕೇಂದ್ರ ಸರಕಾರದ ಮೇಲೆ ಆರೋಪ ಮಾಡುವ ಏಕೈಕ ಉದ್ದೇಶದಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸರಿಯಾದ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಒದಗಿಸಿಲ್ಲ. ಹೀಗಾಗಿ, ಕೇಂದ್ರದಿಂದ ಹಣ ಬಂದಿಲ್ಲ ಎಂದರು.

ಮಧ್ಯೆ ಪ್ರವೇಶಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ಮಾಡಿದ ಕೆಲಸಕ್ಕೆ ದುಡ್ಡು ಕೇಳಲಾಗುತ್ತಿದೆ. ಈ ಸಂಬಂಧ ಕೇಂದ್ರ ಸರಕಾರವೇ ಕಾನೂನು ಮಾಡಿದೆ. ಹಾಗಿದ್ದರೂ, ಹಣ ನೀಡದೆ ಮೀನಾಮೇಷ ಎಣಿಸುತ್ತಿದೆ ಎಂದರು. ಕೋಟಾ ಶ್ರೀನಿವಾಸ್ ಪೂಜಾರಿ ಮತ್ತೆ ಎದ್ದುನಿಂತು ಸರಿಯಾಗಿ ಮಾಹಿತಿ ನೀಡಿದರೆ, ಕೇಂದ್ರ ಸರಕಾರ ಹಣ ಕೊಡುತ್ತಿತ್ತು, ಅಲ್ಲಿಂದ ಹಣ ಬಂದಿಲ್ಲ ಎಂದರೆ ನಾವೇನು ಮಾಡಲು ಸಾಧ್ಯ ಎಂದರು.

ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರಾದ ಜಯಮ್ಮ ಬಾಲರಾಜ್, ವಿಜಯ್‌ಸಿಂಗ್, ಪ್ರಕಾಶ್ ರಾಥೋಡ್, ಬೋಜೇಗೌಡ ಸೇರಿದಂತೆ, ಮತ್ತಿತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೋಟಾ ಶ್ರೀನಿವಾಸ್ ಪೂಜಾರಿ ಮಧ್ಯೆ ಪ್ರವೇಶಿಸಿ, ನರೇಗಾ ಯೋಜನೆಯಡಿ ರಾಜ್ಯ ಸರಕಾರ ಎಷ್ಟು ಪ್ರಸ್ತಾವನೆ ಸಲ್ಲಿಸಿದೆಯೋ ಅಷ್ಟಕ್ಕೆ ಅನುಮತಿ ನೀಡಿದೆ. ಹೆಚ್ಚುವರಿ ಬೇಕು ಎಂದರೆ ಮನವಿ ಮಾಡಿ ಎಂದರು. ಆಗ ಸಚಿವ ಡಿ.ಕೆ.ಶಿವಕುಮಾರ್, ಹೆಚ್ಚುವರಿ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಮಾಡಿದ ಕೂಲಿಗೆ ಹಣ ನೀಡಬೇಕು ಅಷ್ಟೆ. ಆ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ ಎಂದು ದೂರಿದರು.

ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೋಟಾ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ, ಬಡವರಿಗೆ ನೀಡುವ ಹಣವನ್ನು ಕೇಂದ್ರ ಸರಕಾರ ನೀಡದೆ ಇರುವುದಿಲ್ಲ ಎಂದು ಹೇಳಿದರು. ಈ ಹಂತದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ನರೇಗಾ ಯೋಜನೆಯಡಿ 2,049 ಕೋಟಿ ರೂ.ರಾಜ್ಯಕ್ಕೆ ಬಾಕಿ ಬರಬೇಕಾಗಿತ್ತು. ಆ ಹಣವನ್ನು ನೀಡುವಂತೆ ಇತ್ತೀಚೆಗೆ ರಾಜ್ಯದ 25 ಸಂಸದರ ನಿಯೋಗ, ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರೂ, ಕೇವಲ 110 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಕೂಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಬಾರದು ಎನ್ನುವ ಕಾರಣದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯ ಸರಕಾರ ಹಣ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು. ಈ ವರ್ಷ ಎಂಟೂವರೆ ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಈ ವರ್ಷಕ್ಕೆ ಹತ್ತೂವರೆ ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಲಾಗುವುದು. ಕೇಂದ್ರ ಸರಕಾರ ಬಾಕಿ ಹಣ ನೀಡಿದ್ದರೆ, ಕಳೆದ ವರ್ಷ ದಿನಗಳ ಸೃಷ್ಟಿ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News