ಶಾಸಕ ನಾರಾಯಣಗೌಡರನ್ನು ಬಂಧನದಲ್ಲಿಟ್ಟುಕೊಂಡಿದ್ದಾರೆ: ಜೆಡಿಎಸ್‌ ಶಾಸಕ ಶಿವಲಿಂಗೇಗೌಡ

Update: 2019-02-12 14:42 GMT

ಬೆಂಗಳೂರು, ಫೆ. 12: ‘ನಮ್ಮ ಪಕ್ಷದ ಶಾಸಕ ನಾರಾಯಣಗೌಡ ಅವರನ್ನು ಮುಂಬೈನಲ್ಲಿ ಬಂಧನದಲ್ಲಿಟ್ಟುಕೊಂಡಿದ್ದು, ಅವರ ಸಂಬಂಧಿಕರನ್ನು ನೋಡಲು ಬಿಡುತ್ತಿಲ್ಲ ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಆಡಿಯೋ ಪ್ರಕರಣ ತನಿಖೆ ವಿಚಾರ ಸಂಬಂಧದ ಚರ್ಚೆ ವೇಳೆ ಮಾತನಾಡಿದ ಅವರು, ನಾರಾಯಣಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರನ್ನು ಯಾರು ಬಂಧನದಲ್ಲಿಟ್ಟುಕೊಂಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಅವರನ್ನು ಹೊರಗೆ ಕರೆತರಲು ಆಗುತ್ತಿಲ್ಲ ಎಂದರು.

‘ನಮ್ಮ ಪತ್ನಿ, ಮಕ್ಕಳೇ ನಮ್ಮನ್ನು ಸಂಶಯದಿಂದ ನೋಡುವ ಸ್ಥಿತಿ ಬಂದಿದ್ದು, ಶಾಸಕರೆಂದರೆ ಗೌರವವಿಲ್ಲ. ಶಾಸಕರು ಖರೀದಿ ವಸ್ತುವಾಗಿದ್ದು, ಎಲ್ಲಿಗಾದರೂ ಹೊರಟರೆ ‘ಡೀಲ್’ಗೆ ಹೊರಟ್ಟಿದ್ದೀರಿ ಎಂಬಂತೆ ನೋಡುತ್ತಾರೆಂದು ಶಿವಲಿಂಗೇಗೌಡ ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿವನ್ನು ತೆಗೆಯಲು ಎಂಟು ತಿಂಗಳಿಂದ ಧಾರಾವಾಹಿ ರೂಪದಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿವೆ. ನಿಮಗೆ ಆತ್ಮಗೌರವ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕರ ಸಂಖ್ಯೆ-113 ಇರುವುದರಿಂದಲೇ ಕುಮಾರಸ್ವಾಮಿಯವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿರುವುದು. ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದೆ ಹೋಗಿದ್ದರೆ ನೀವು (ಬಿಜೆಪಿ) ಹದಿನೈದು ದಿನಕ್ಕೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತಿದ್ದೀರಿ. ಮುಖ್ಯಮಂತ್ರಿ ಗೋಳು ಹೊಯ್ದುಕೊಂಡರೆ ಆ ಶಾಪ ನಿಮ್ಮನ್ನು ಬಿಡುವುದಿಲ್ಲ. ಈ ನಾಟಕಕ್ಕೆ ತೆರೆ ಎಳೆಯಿರಿ ಎಂದು ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ನಿಮ್ಮದೆ ಸರಕಾರ ಅಧಿಕಾರದಲ್ಲಿದೆ. ಹೀಗಿರುವ ವೇಳೆ ಶಾಸಕರನ್ನು ನೀವೇ ರಕ್ಷಣೆ ಮಾಡಲು ಸಾಧ್ಯವಿಲ್ಲವೆಂದರೆ ಹೇಗೇ? ಸೂಕ್ತ ರೀತಿಯ ತನಿಖೆ ಮಾಡಿಸಿ, ಶಾಸಕರನ್ನು ಕರೆತನ್ನಿ’

-ಬಸವರಾಜ ಬೊಮ್ಮಾಯಿ, ಬಿಜೆಪಿ ಸದಸ್ಯ

‘ನಿಮ್ಮ ಮೈತ್ರಿ ಸರಕಾರ, ನಿಮ್ಮ ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲದೆ, ಆ ಶಾಸಕರು ಮುಂಬೈಗೆ ಹೋಗಿರಬಹುದು. ಅದಕ್ಕೆ ನಾವು ಹೊಣೆಗಾರರಲ್ಲ, ನಿಮ್ಮ ಶಾಸಕರ ರಕ್ಷಣೆ ಮಾಡಿಕೊಳ್ಳುವುದು ನಿಮ್ಮ ಹೊಣೆ’

-ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಶಾಸಕ

ನಮ್ಮ ಪಕ್ಷದ ಶಾಸಕ ನಾರಾಯಣಗೌಡ ಅವರನ್ನು ಮುಂಬೈನಲ್ಲಿ ಬಂಧನದಲ್ಲಿ ಇಟ್ಟುಕೊಂಡಿದ್ದು, ಮಹಾರಾಷ್ಟ್ರದಲ್ಲಿ ನಿಮ್ಮದೆ(ಬಿಜೆಪಿ) ಸರಕಾರ ಆಡಳಿತದಲ್ಲಿದೆ. ಕೂಡಲೇ ಅವರನ್ನು ಬಂಧ ಮುಕ್ತಗೊಳಿಸಿ, ಅವರ ಕುಟುಂಬದ ಸದಸ್ಯರ ಭೇಟಿಗೆ ಅವಕಾಶ ನೀಡಬೇಕು’

-ಸಾ.ರಾ.ಮಹೇಶ್ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News