ಸವಿತ ಸಮಾಜ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ: ಸಿಎಂ ಕುಮಾರಸ್ವಾಮಿ

Update: 2019-02-12 16:05 GMT

ಬೆಂಗಳೂರು, ಫೆ.12: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸವಿತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಸವಿತ ಸಮಾಜ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದ್ದು, ಇದಕ್ಕೆ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಶ್ರೀ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸವಿತ ಸಮಾಜ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಅನುದಾನ ಕೇಳಿದ್ದಾರೆ. ಈ ವರ್ಷ ರೈತರ ಸಾಲ ಮನ್ನಾ, ಸರಕಾರಿ ನೌಕರರ ಸಂಬಳ ಹೆಚ್ಚಳ ಮಾಡಬೇಕಿರುವುದರಿಂದ ಸರಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಆದರೆ, ಮುಂದಿನ ಸಾಲಿನಿಂದ ಸವಿತ ಸಮಾಜ ಅಭಿವೃದ್ದಿ ಪ್ರಾಧಿಕಾರ ಕೇಳುವಷ್ಟು ಹಣವನ್ನು ನೀಡಲಿದ್ದೇನೆಂದು ತಿಳಿಸಿದರು.

ಸಣ್ಣ ಸಮಾಜಗಳ ಅಭಿವೃದ್ದಿಯೆ ಗುರಿ: ಸಮಾಜದ ಮುಖ್ಯ ನೆಲೆಯಲ್ಲಿ ಗುರುತಿಸಿಕೊಳ್ಳದೆ ಇರುವ ಸುಮಾರು 60 ಸಮುದಾಯಗಳನ್ನು ಗುರುತಿಸಲಾಗಿದ್ದು, ಈ ಸಮುದಾಯಗಳ ಸಮಗ್ರ ಅಭಿವೃದ್ದಿಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಸರಕಾರದ ಅನುದಾನಗಳು ನೇರವಾಗಿ ಈ ಸಮುದಾಯಗಳ ಪ್ರತಿ ಕುಟುಂಬದ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆಹಾರ ಸಚಿವ ಝಮೀರ್ ಅಹ್ಮದ್ ಖಾನ್, ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಕರ್ನಾಟಕ ಲೋಕಸೇವಾ ಆಯೋಗದ ಡಾ.ಆರ್.ಲಕ್ಷ್ಮಿ ನಾರಾಯಣ, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ ಮತ್ತಿತರರಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ಹೆಚ್ಚಿನ ಅನುದಾನ ಸಿಗಲಿಲ್ಲವೆಂದು ಸಚಿವ ಝಮೀರ್ ಅಹ್ಮದ್ ಖಾನ್ ಮೇಲೆ, ಆ ಸಮುದಾಯ ಜನತೆ ಒತ್ತಡ ಹಾಕುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಈ ಬಾರಿ ರೈತರ ಸಾಲ ಮನ್ನಾ, ಸರಕಾರಿ ನೌಕರರ ಸಂಬಳ ಏರಿಕೆಯಿಂದಾಗಿ ಸರಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಆದರೆ, ಮುಂದಿನ ಬಜೆಟ್‌ನಲ್ಲಿ ಅನುದಾನ ಕೊರತೆ ಖಂಡಿತ ಇರುವುದಿಲ್ಲ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News