‘ಧ್ವನಿ ಸುರುಳಿ ಬಿಡುಗಡೆ’ ದಂಡನಾರ್ಹ ಅಪರಾಧ: ಯಡಿಯೂರಪ್ಪ

Update: 2019-02-12 16:17 GMT

ಬೆಂಗಳೂರು, ಫೆ. 12: ಜೆಡಿಎಸ್ ಶಾಸಕ ನಾಗನಗೌಡ ಪುತ್ರನ ಜೊತೆ ನಡೆದಿರುವ ಸಂಭಾಷಣೆಗೆ ಸಂಬಂಧಿಸಿದ ಧ್ವನಿ ಸುರುಳಿಯನ್ನು ರಾಜಕೀಯ ಉದ್ದೇಶಕ್ಕಾಗಿ ತಿರುಚಿ ಬಿಡುಗಡೆ ಮಾಡಿರುವುದು ದಂಡನಾರ್ಹ ಅಪರಾಧ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾಗನಗೌಡ ಅವರ ಪುತ್ರ ಶರಣಗೌಡನನ್ನು ನಾನೇ ಕಳುಹಿಸಿದೆ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ನಮ್ಮ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ತಮಗೆ ಬೇಕಾದಂತೆ ತಿರುಚಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ, ಸ್ಪೀಕರ್ ಹೆಸರು ಉಲ್ಲೇಖಿಸಿ ಹಣಕಾಸಿನ ವ್ಯವಹಾರ ಮಾತನಾಡುವಾಗ ನಾನು ಅಲ್ಲಿ ಉಪಸ್ಥಿತನಿದ್ದೆ ಎಂದು ಉಲ್ಲೇಖಿಸಿದ್ದಾರೆ. ನನ್ನ ವಿರುದ್ಧ ಮಾಡಿರುವ ಈ ಆಪಾದನೆಯನ್ನು ಸಾಬೀತು ಪಡಿಸಿದರೆ, ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಯಡಿಯೂರಪ್ಪ ಸವಾಲು ಹಾಕಿದರು.

ನಕಲಿ ಆಡಿಯೋ ಬಿಡುಗಡೆ ಮಾಡಿದ್ದು, ಸುಳ್ಳು ಹೇಳಿದ್ದು, ಮೋಸ ಮಾಡುವ ಉದ್ದೇಶದಿಂದ ಆಡಿಯೋ ಬಿಡುಗಡೆ ಮಾಡಿದ್ದು, ನಕಲಿ ಎಂದು ಗೊತ್ತಿದ್ದು ಅದು ನಿಜವೆಂದು ಬಿಂಬಿಸಿದ್ದು, ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಅಪರಾಧವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಅವರು ಹೇಳಿದರು.

ಧ್ವನಿ ಸುರುಳಿಯು ಸುಮಾರು 30-35 ನಿಮಿಷ ಇದೆ. ಆದರೆ, ಅದನು ಎರಡು ನಿಮಿಷಕ್ಕೆ ಸೀಮಿತಗೊಳಿಸಿ, ಮಾಧ್ಯಮಗಳಲ್ಲಿ ಬಿತ್ತರಿಸಲು ನೀಡಿರುವುದು ರಾಜಕೀಯ ಷಡ್ಯಂತ್ರ. ಮುಖ್ಯಮಂತ್ರಿಗೆ ಸ್ಪೀಕರ್ ಬಗ್ಗೆ ಪ್ರಾಮಾಣಿಕವಾಗಿ ಗೌರವ ಇದ್ದಿದ್ದರೆ, ಅವರನ್ನು ಭೇಟಿ ಮಾಡಿ, ಈ ರೀತಿಯ ಸುದ್ದಿಯಿದೆ, ಏನು ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದರು ಎಂದು ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ಪ್ರಾಮಾಣಿಕರಿದ್ದರೆ 2 ನಿಮಿಷದ ಬದಲು ಸಂಪೂರ್ಣ ಆಡಿಯೋ ಬಿಡುಗಡೆ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿ ಮಾಡಿರುವ ಅಪರಾಧ ಕೃತ್ಯವು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಘಟನೆಯನ್ನು ನಿಮ್ಮ ಸರಕಾರ-ಕುರ್ಚಿ ಉಳಿಸಿಕೊಳ್ಳಲು ದುರುಪಯೋಗಪಡಿಸಿಕೊಂಡಿರುವುದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಅವರು ಹೇಳಿದರು.

20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಒಪ್ಪಲು ಸಿದ್ಧರಿಲ್ಲ ಎಂದು ಮುಂಬೈ ಸೇರಿದಂತೆ ಬೇರೆ ಕಡೆ ಹೋಗಿದ್ದರೆ, ಅದು ನಿಮ್ಮ ಆಡಳಿತ ವೈಖರಿಗೆ ಬೇಸತ್ತೇ ಹೊರತು, ಅದಕ್ಕೆ ನಾನಾಗಲಿ, ಬಿಜೆಪಿಯಾಗಲಿ ಕಾರಣವೇ? ನಿಮ್ಮ ಶಾಸಕರನ್ನು ಕಾಯ್ದಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ನಮ್ಮ ಶಾಸಕ ಸುಭಾಷ್ ಗುತ್ತೇದಾರ್‌ರನ್ನು ಸಚಿವನನ್ನಾಗಿ ಮಾಡುವುದಾಗಿ ಆಮಿಷವೊಡ್ಡಿಲ್ಲವೇ? ನಿಮ್ಮ ಇಬ್ಬರು ಸಚಿವರು ಬಿಜೆಪಿಯ ಐದಾರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆಗಳನ್ನು ನೀಡಲಿಲ್ಲವೇ? ಈಗ ಸತ್ಯಹರಿಶ್ಚಂದ್ರನ ಮಕ್ಕಳಂತೆ ಬಿಂಬಿಸಿಕೊಳ್ಳುತ್ತಿದ್ದೀರಾ? ಎಂಎಲ್‌ಸಿ ಮಾಡೋಕೆ 25 ಕೋಟಿ ರೂ, ರಾಜ್ಯಸಭಾ ಸ್ಥಾನಕ್ಕೆ 50 ಕೋಟಿ ರೂ.ಕೇಳುತ್ತೀರಾ ಇದು ಶೋಭೆ ತರುತ್ತದೆಯೇ ಅವರು ಹೇಳಿದರು.

ಆಡಿಯೋ ಪ್ರಕರಣದ ಕುರಿತ ತನಿಖೆಗೆ ನಮ್ಮ ವಿರೋಧವಿಲ್ಲ. ಎಸ್‌ಐಟಿ ಮುಖ್ಯಮಂತ್ರಿಯ ಅಧೀನದಲ್ಲಿರುವುದರಿಂದ ನಮಗೆ ಈ ತನಿಖೆಯ ಮೇಲೆ ವಿಶ್ವಾಸವಿಲ್ಲ. ಈ ಪ್ರಕರಣದ ಮೊದಲ ಆರೋಪಿಯೇ ಸ್ವತಃ ಮುಖ್ಯಮಂತ್ರಿಯಾಗಿದ್ದಾರೆ. ಈ ಮನೆಯ ಸದಸ್ಯರ ಬಗ್ಗೆ ನಿಮಗೆ ಭರವಸೆಯಿದ್ದರೆ, ಸದನ ಸಮಿತಿ ರಚಿಸಿ ತನಿಖೆಗೆ ಆದೇಶಿಸಿ ಎಂದು ಅವರು ಕೋರಿದರು.

ಎಸ್‌ಐಟಿಗೆ ಆದೇಶ ಮಾಡಲು ಸ್ಪೀಕರ್‌ಗೆ ಅಧಿಕಾರವಿಲ್ಲ. ಕಳೆದ ಎರಡು ದಿನಗಳಿಂದ ಈ ಚರ್ಚೆ ನಡೆಯುತ್ತಿದ್ದರೂ, ನೀವು ತಮ್ಮ ಕೊಠಡಿಗೆ ಕರೆದು ಚರ್ಚೆ ಮಾಡಿಲ್ಲ. ಸರಕಾರದ ಯಾವ ಪ್ರತಿನಿಧಿಯೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಕರೆದು ಮಾತನಾಡಿಸಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಸ್ಪೀಕರ್‌ಗೆ ಅವಮಾನ

ನಿಮ್ಮ (ಬಿಜೆಪಿ) ಮುಖ್ಯಸಚೇತಕ ನನ್ನ ಬಳಿ ಬಂದು ನಾವು ಕಲಾಪ ಸಲಹಾ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು. ಕಲಾಪ ಸಲಹಾ ಸಮಿತಿ ಸಭೆಯನ್ನು ಕರೆಯುವುದು ಸ್ಪೀಕರ್, ಸರಕಾರವಲ್ಲ. ನಿಮ್ಮ ನಿರ್ಧಾರದಿಂದ ನನಗೆ ಅವಮಾನವಾಗಿದೆ ಎಂದು ಹೇಳಿದ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್, ಬಳಿಕ ಬುಧವಾರ ಬೆಳಗ್ಗೆ 10.30ಕ್ಕೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News