'ಆಪರೇಶನ್ ಆಡಿಯೋ' ವಿಚಾರ ಈಗ ಸದನದ ಆಸ್ತಿಯಾಗಿದೆ: ಸಿದ್ದರಾಮಯ್ಯ

Update: 2019-02-12 16:22 GMT

ಬೆಂಗಳೂರು, ಫೆ.12: ಧ್ವನಿ ಸುರುಳಿ ವಿಚಾರ ಕಳೆದ ಎರಡು ದಿನಗಳಿಂದ ಸದನದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ, ಸಂಸತ್ತಿನಲ್ಲಿಯೂ ಈ ವಿಚಾರ ಚರ್ಚೆಯಾಗಿದೆ. ಈಗ ಇದು ಸದನದ ಆಸ್ತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೆ ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಯಾವುದಾದರೂ ಒಂದು ತನಿಖೆ ನಡೆದು ಕಳಂಕದಿಂದ ಹೊರ ಬರಬೇಕಿದೆ ಎಂದರು.

ಸಾರ್ವಜನಿಕವಾಗಿ ನಮ್ಮ ಬಗ್ಗೆ ಇರುವ ಗೌರವ ಕ್ರಮೇಣ ಕಡಿಮೆಯಾಗುತ್ತಿದೆ. ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ಸದನದಲ್ಲಿ ನಡೆಯುತ್ತಿರುವ ಚರ್ಚೆಗಳು ನೋಡಿದರೆ ಜನ ನಮ್ಮ ಮೇಲೆ ಸಂಶಯಪಡುವುದು ಸಹಜವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸದನದ 224 ಸದಸ್ಯರಿಗೂ ನಿಮ್ಮ ಮೇಲೆ ವಿಶ್ವಾಸವಿದೆ. ನಿಮ್ಮ ಪ್ರಾಮಾಣಿಕತೆ, ನಿಮ್ಮ ಖಾಸಗಿ ಹಾಗೂ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ಈ ಸುದ್ದಿಯಿಂದಾಗಿ ಭಾವನಾತ್ಮಕವಾಗಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ, ಈ ಧ್ವನಿ ಸುರುಳಿಯ ಸತ್ಯಾಸತ್ಯತೆ ಏನು ಎಂಬುದು ಹೊರಗೆ ಬರಬೇಕಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದಾಗಿನಿಂದಲೂ ಒಂದೇ ಪ್ರಶ್ನೆ ನಮ್ಮ ಮುಂದೆ ಬರುತ್ತಿದೆ. ಈ ಸರಕಾರ ಉಳಿಯುತ್ತದೆಯೇ? ಈ ಸರಕಾರ ಅಭದ್ರವಾಗಿದೆ. ಬಾಂಬೆ, ಚೈನ್ನೈ, ದಿಲ್ಲಿಗೆ 10, 14 ಶಾಸಕರು ಹೋಗಿದ್ದಾರಂತೆ ಎಂಬ ಪ್ರಶ್ನೆಗಳು ನಮ್ಮ ಮುಂದೆ ಬರುತ್ತಿವೆ. ಕೆಲವು ಮಾಧ್ಯಮಗಳಂತೂ ಸರಕಾರಕ್ಕೆ ಗಡುವನ್ನು ನೀಡಿ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಪ್ರಕರಣ ಆರಂಭವಾದದ್ದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿ ನಡೆಸಿದರಲ್ಲ, ಅಲ್ಲಿಂದಲ್ಲ. ಬದಲಾಗಿ, ಶರಣಗೌಡನನ್ನು ಕರೆದು ಮಾತುಕತೆ ನಡೆಸಲಾಯಿತಲ್ಲ ಅಲ್ಲಿಂದಲೇ ಈ ಪ್ರಕರಣ ಆರಂಭವಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಐಪಿಸಿಯಡಿಯಲ್ಲಿ ಈ ಪ್ರಕರಣ ಬರುತ್ತದೆ ಎಂದು ಅವರು ಹೇಳಿದರು.

ಇಂತಹ ವಿಷಯ ಒಬ್ಬ ಮುಖ್ಯಮಂತ್ರಿಯ ಗಮನಕ್ಕೆ ಬಂದಾಗ ಸುಮ್ಮನೆ ಕೂರುವುದು ಅಪರಾಧವಾಗುತ್ತದೆ. ನ್ಯಾಯಾಂಗ ಸಮಿತಿ ಹಾಗೂ ಸದನ ಸಮಿತಿಯು ಸತ್ಯಶೋಧನೆಯನ್ನು ನೀಡಲು ಮಾತ್ರ ಸಾಧ್ಯ. ಪ್ರಾಸಿಕ್ಯೂಷನ್ ಮಾಡಲು ಅಧಿಕಾರವಿಲ್ಲ. ಎಸ್‌ಐಟಿಯಿಂದ ಕಾಲಮಿತಿಯಲ್ಲಿ ತನಿಖೆ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಡಿ, ನಮ್ಮಿಂದ ತಪ್ಪಾಗಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ನೀವೆ(ಸ್ಪೀಕರ್) ಈಗ ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದರೂ ಅದು ಯಾರೂ ಒಪ್ಪುವುದಿಲ್ಲ. ಇಂತಹ ಗಂಭೀರವಾದ ವಿಷಯಗಳು ತಾರ್ಕಿಕ ಅಂತ್ಯ ಕಾಣಲೇಬೇಕು. ಸ್ಪೀಕರ್ ಸ್ಥಾನದ ಘನತೆಗೆ ಕುಂದು ಉಂಟಾಗಬಾರದು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News