ಮ್ಯಾನ್‌ಹೋಲ್ ಸ್ವಚ್ಛ ಮಾಡುವ ಯಂತ್ರಕ್ಕೆ ಜಿಪಿಎಸ್ ಅಳವಡಿಕೆ: ತುಷಾರ್ ಗಿರಿನಾಥ್
ಬೆಂಗಳೂರು, ಫೆ.12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2.40 ಲಕ್ಷ ಮ್ಯಾನ್ ಹೋಲ್‌ಗಳಿದ್ದು, ಸ್ವಚ್ಛ ಮಾಡುವ ಜಟಿಂಗ್ ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸುವುದಕ್ಕೆ ಯಂತ್ರಗಳಿಗೂ ನಂಬರಿಂಗ್ ಮಾಡಿ ಜಿಪಿಎಸ್ ಅಳವಡಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮಂಗಳವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿನ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಪಾಲಿಕೆಯ ವಿಶೇಷ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಸದಸ್ಯರ ಸಮಸ್ಯೆಗೆ ಉತ್ತರಿಸಿದ ಅವರು, ಕಳೆದ ಜನವರಿಯಿಂದ ಸ್ವಚ್ಛ ಮಾಡುವ ಜಟಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸ್ವಚ್ಛತೆಯ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹೇಳಿದರು.
ಜಲಮಂಡಳಿಯಲ್ಲಿ ಪ್ರಸ್ತುತವಾಗಿ 110 ಜಟಿಂಗ್ ಯಂತ್ರಗಳಿದ್ದು, 36 ಹೊಸ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಬಿಬಿಎಂಪಿಯಿಂದ 110 ಹಳ್ಳಿಗಳಿಗೆ 30 ಜಟಿಂಗ್ ಯಂತ್ರ ಕೊಡುವುದಾಗಿ ಹೇಳಲಾಗಿತ್ತು. ಎಲ್ಲ ಸೇರಿದರೆ 176 ಜಟಿಂಗ್ ಯಂತ್ರಗಳಾಗಲಿವೆ. ಇನ್ನು ಒಳಚರಂಡಿ ಹೂಳು ತೆಗೆಯುವುದಕ್ಕೆ ಹೊರ ಗುತ್ತಿಗೆಯಲ್ಲಿ 4 ಬೃಹತ್ ಯಂತ್ರ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರಕ್ಕೆ ಕಾವೇರಿಯಿಂದ 1,400 ಎಂಎಲ್‌ಡಿ ಕಾವೇರಿ ನೀರು, 400 ಎಂಎಲ್‌ಡಿ ಕೊಳವೆ ಬಾವಿ ನೀರು ನಗರದಲ್ಲಿ ಪ್ರತಿದಿನ ಪೂರೈಕೆ ಆಗುತ್ತಿದೆ. ಅದಕ್ಕೆ 1,440 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. 2017ರವರೆಗೆ 721 ಎಂಎಲ್‌ಡಿ (ಶೇ.50ರಷ್ಟು) ತ್ಯಾಜ್ಯ ನೀರು ಸಂಸ್ಕರಣಾ ಸಾಮರ್ಥ್ಯ ಹೊಂದಲಾಗಿತ್ತು. 2018ರಲ್ಲಿ 336 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡುವ 10 ಘಟಕ ಸ್ಥಾಪನೆ (ಎಸ್‌ಟಿಪಿ) ಮಾಡುವುದಕ್ಕೆ ಜೈಕಾ ವತಿಯಿಂದ ಅನುದಾನ ಪಡೆದು ಯೋಜನೆ ಆರಂಭಿಸಲಾಗಿದೆ. 440 ಎಂಎಲ್‌ಡಿ ಸಾಮರ್ಥ್ಯದ ಹೆಬ್ಬಾಳ, ಕೆಎನ್‌ಸಿ ವ್ಯಾಲಿ ಸೇರಿದಂತೆ ನಾಲ್ಕು ಕಡೆ ಎಸ್‌ಟಿಪಿ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಅಮೃತ್ ಯೋಜನೆ ಅಡಿಯಲ್ಲಿ 75 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2020ರ ವೇಳೆಗೆ 1,575 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಲಾಗುವುದು. ಇನ್ನು 110 ಹಳ್ಳಿಗಳಿಗೆ 75 ಎಂಎಲ್‌ಡಿ ನೀರು ನೀಡಲಾಗುವುದು. ಇದರಿಂದ 2020ರಲ್ಲಿ 115 ಹೆಚ್ಚಿನ ಪ್ರಮಾಣ ತ್ಯಾಜ್ಯ ನೀರು ಉತ್ಪತ್ತಿಯಾಗಲಿದೆ. ಅದಕ್ಕಾಗಿ ಕೆರೆ ಪ್ರದೇಶದಲ್ಲಿ ನಾಲ್ಕು ಕಡೆ ಎಸ್‌ಟಿಪಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ಸದಸ್ಯ ಗುಣಶೇಖರ್ ಮಾತನಾಡಿ, ಜಯಮಹಲ್ ವಾರ್ಡ್ ಬೆನ್ಸನ್ ಟೌನ್‌ಗೆ 10 ದಿನಗಳಾದರೂ ಕುಡಿಯುವ ನೀರು ಬರುವುದಿಲ್ಲ. ಇದರಿಂದ ಅಲ್ಲಿ ವಾಸಿಸುವ ನಿವಾಸಿಗಳಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಇದರಿಂದ ಸ್ಥಳೀಯರು ನನ್ನ ಬಗ್ಗೆ ಸಾಮಾಜಿಕ ಜಾಲತಾಣ, ವ್ಯಾಟ್ಸಾಪ್‌ಗಳಲ್ಲಿ ಸೂಜಿಯಲ್ಲಿ ಚುಚ್ಚುವ ರೀತಿ ಮಾತಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿ, ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.
ತ್ಯಾಜ್ಯ ನೀರು ಸಂಸ್ಕರಣೆ: ಕಾವೇರಿ ಐದನೇ ಹಂತದಲ್ಲಿ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಕೆರೆ ಬಳಿ ಎಸ್‌ಟಿಪಿ ನಿರ್ಮಾಣ ಮಾಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಿ ಕೆರೆಗೆ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವರ್ಷ ಕಾರ್ಯ ಆರಂಭವಾಗಲಿದೆ. 914 ಪ್ರದೇಶದಲ್ಲಿ ಕೊಳಚೆ ನೀರನ್ನು ರಾಜಕಾಲುವೆಗೆ ಹರಿಸಲಾಗುತ್ತಿದೆ ಎಂದು ಗುರುತಿಸಲಾಗಿದೆ. ಅದನ್ನು ಸರಿಪಡಿಸುವುದಕ್ಕೆ 76 ಕೋಟಿ ರೂ. ಬೇಕಾಗಲಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.
ಎಲ್ಲ 198 ವಾರ್ಡ್‌ಗಳಿಗೆ ನೀರು ಬಿಡುವ ವಿಚಾರದಲ್ಲಿ ಜಲಮಂಡಳಿಯ ಗ್ಯಾಂಗ್‌ಮನ್‌ಗಳು ತಾರತಮ್ಯ ಮಾಡುತ್ತಿದ್ದಾರೆ. ಒಂದು ವಾರ್ಡ್‌ಗೆ ವಾರಕ್ಕೆ 2-3 ಬಾರಿ ಬಿಟ್ಟರೆ, ಮತ್ತೊಂದು ವಾರ್ಡ್‌ಗೆ 10 ದಿನಗಳಾದರೂ ಬಿಡುವುದಿಲ್ಲ.
-ಮಹಮ್ಮದ್ ರಿಝ್ವಾನ್ ನವಾಬ್, ಬಿಬಿಎಂಪಿ ಸದಸ್ಯ
ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ರೈಲುಗಳನ್ನು ತೊಳೆಯಲು ಕಾವೇರಿ ನೀರನ್ನು ಉಪಯೋಗಿಸಲಾಗುತ್ತಿದೆ. ಈ ಪೈಕಿ ರೈಲು ತೊಳೆಯಲು ಬಳಕೆ ಮಾಡುತ್ತಿರುವ ನೀರನ್ನು ಯಶವಂತಪುರ ವಾರ್ಡ್‌ಗೆ ನೀಡಬೇಕು.
-ಮುನಿರತ್ನ, ಶಾಸಕ