×
Ad

ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಚಿವ ಎಚ್.ಡಿ.ರೇವಣ್ಣ

Update: 2019-02-12 22:18 IST
ಫೈಲ್ ಚಿತ್ರ

ಬೆಂಗಳೂರು, ಫೆ.12: ಆಡಿಯೋ ವಿಚಾರದ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ಆಡಿಯೋ ವಿಚಾರದ ಕುರಿತು ಕಾವೇರಿದ ಚರ್ಚೆ ನಡೆಯುವಾಗ ರೇವಣ್ಣ ಮಧ್ಯಪ್ರವೇಶಿಸಿದರು.

ಬಿಜೆಪಿ ನಾಯಕ ಆರ್.ಅಶೋಕ್ ಫೆ.6ರಂದು ರಾಜ್ಯಪಾಲರ ಭಾಷಣ ಆಗುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಫೆ.8ರಂದು ಬಜೆಟ್ ಮಂಡಿಸುವುದಿಲ್ಲ. ಸರಕಾರವೇ ಇರುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ, ನಾನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡಗೆ ಹೇಳಿದ್ದೆ ಬಜೆಟ್ ಮಂಡನೆಯಾಗುತ್ತದೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಆ ರೀತಿ ನಾನು ಸಮಯ ನಿಗದಿಗೊಳಿಸಿದ್ದೇನೆಂದು ಅವರು ಹೇಳಿದರು.

ಮುಖ್ಯಮಂತ್ರಿ ಮಧ್ಯಾಹ್ನ 12.35ಕ್ಕೆ ಬಜೆಟ್ ಮಂಡನೆ ಪ್ರಾರಂಭ ಮಾಡುತ್ತಾರೆ. 12.40ಕ್ಕೆ ಬಿಜೆಪಿಯವರು ಸದನದಿಂದ ಹೊರಗೆ ಹೋಗುತ್ತಾರೆ. ಬಜೆಟ್ ಮಂಡನೆ ಸುಗಮವಾಗಿ ನಡೆಯುತ್ತದೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ರೇವಣ್ಣ ಹೇಳುತ್ತಿದ್ದಂತೆ, ಇಡೀ ಸದನ ನಗೆಗಡಲಲ್ಲಿ ತೇಲಿತು.

ಇದಕ್ಕೂ ಮುನ್ನ ರೇವಣ್ಣ ಮಾತನಾಡಲು ಎದ್ದು ನಿಂತಾಗ, ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿ ಸದಸ್ಯ ಸಿ.ಟಿ.ರವಿ ಹಾಗೂ ಬಸವರಾಜ ಬೊಮ್ಮಾಯಿಯನ್ನು ಉದ್ದೇಶಿಸಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರನ್ನು ಮಾತನಾಡಲು ಬಿಡಿ, ಇನ್ನೆರಡು ನಿಮಿಷ ತಡವಾದರೆ ಅವರು ಮಾತನಾಡುವುದಿಲ್ಲ. ಶುಭಗಳಿಗೆ ಮೀರಿ ಹೋಗಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸಂದರ್ಭದಲ್ಲಿ ಸ್ಪೀಕರ್‌ರನ್ನು ವಂದಿಸಿದ ರೇವಣ್ಣ. ಎರಡು ದಿನಗಳಾದ ಬಳಿಕ ನನಗೆ ಸಮಯ ನೋಡಿಕೊಂಡು ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ನಿಮಗೆ ವಂದನೆಗಳು ಎಂದಾಗ ಸಭೆ ಮತ್ತೆ ನಗೆಗಡಲಲ್ಲಿ ತೇಲಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News