×
Ad

ಫೆ.14,15 ರಂದು ಸಂತ ಸೇವಾಲಾಲ್ ಜಯಂತಿ

Update: 2019-02-12 22:25 IST

ಬೆಂಗಳೂರು, ಫೆ.12: ಬಂಜಾರ ಸಮುದಾಯದ ಧಾರ್ಮಿಕ ಗುರುಗಳಾದ ದಾರ್ಶನಿಕ ಸಂತ ಸೇವಾಲಾಲರ 280ನೆ ಜಯಂತಿ ಫೆ.15 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಬಳಿ ಇರುವ ಭಾಯಾಗಡ್ ಎಂಬಲ್ಲಿ ಸಂತ ಸೇವಾಲಾಲ್ ಜನಿಸಿದ್ದರು. ಅವರ ಜನ್ಮಸ್ಥಳದಲ್ಲಿ ಪ್ರತಿ ವರ್ಷವೂ ಎರಡು ದಿನಗಳ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಅದರ ಭಾಗವಾಗಿ ಫೆ.14 ರಂದು ಕಾರ್ಯಕ್ರಮ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಂದು ಬೆಳಗ್ಗೆ ಕಾಟಿ ಆರೋಹಣದ ಮೂಲಕ ಕಾರ್ಯಕ್ರಮ ಆರಂಭಗೊಳ್ಳುವುದು ಹಾಗೂ ಸಂಜೆಯವರೆಗೂ ವಿವಿಧ ಸೇವೆಗಳು ನಡೆಯುತ್ತವೆ. ಎರಡನೇ ದಿನ ಮಧ್ಯಾಹ್ನ ಸೇವಾಲಾಲರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಸಮಾರಂಭದಲ್ಲಿ ಹಲವಾರು ಜನ ಗಣ್ಯರು ಅತಿಥಿಗಳಾಗಿ ಭಾಗವಹಿಸುತ್ತಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಇದರಲ್ಲಿ ಬಂಜಾರ ಸಮುದಾಯದವರು ಅಲ್ಲದೆ, ಸಂತ ಸೇವಾಲಾಲರ ಸಹಸ್ರಾರು ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫೆ.15 ರಂದು ಬೆಂಗಳೂರಿನಲ್ಲಿ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆ ಬನಪ್ಪ ಉದ್ಯಾನವನದಿಂದ ಮೆರವಣಿಗೆ ಆರಂಭವಾಗಲಿದ್ದು, ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸುವ ಕಲಾ ತಂಡಗಳು ಬಂಜಾರ ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ. ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ನೂತನ ಸ್ವರೂಪ ನೀಡಿ ಅಭಿವೃದ್ಧಿ

ಸಂತ ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪಗ್ರಾಮಕ್ಕೆ ನೂತನ ಸ್ವರೂಪ ನೀಡಲು ನಿರ್ಧರಿಸಿದ್ದು, ಈ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯನ್ನು ತಯಾರು ಮಾಡಲಾಗಿದೆ. ಸಂತ ಸೇವಾಲಾಲರು ಜನಿಸಿದ ಈ ಧಾರ್ಮಿಕ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಇಲ್ಲಿ ಕಲ್ಯಾಣ ಮಂಟಪ, ದಾಸೋಹ ಭವನ, ಆಯುರ್ವೇದ ಆಸ್ಪತ್ರೆ, ವಸತಿಗೃಹ, ಅತಿಥಿಗೃಹ, ಧರ್ಮಶಾಲ, ವೃದ್ಧಾಶ್ರಮ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಬಂಜಾರ ಸಮುದಾಯವರಿಗೆ ಮಾತ್ರವಲ್ಲದೆ ಎಲ್ಲ ಪ್ರವಾಸಿಗರಿಗೂ ಆಕರ್ಷಣೆಯಾಗಲಿರುವ ಈ ಸ್ಥಳದ ಅಭಿವೃದ್ಧಿಗೆ ಯೋಜನೆ ತಯಾರಿಸಲಾಗಿದ್ದು, ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News