ಬುಡಕಟ್ಟು ಸಮುದಾಯವನ್ನು ಒಕ್ಕಲೆಬ್ಬಿಸುವ ಹುನ್ನಾರ ಖಂಡಿಸಿ ವಿಧಾನಸೌಧ ಚಲೋ

Update: 2019-02-12 17:02 GMT

ಬೆಂಗಳೂರು, ಫೆ.12: ಅರಣ್ಯವಾಸಿಗಳಾಗಿರುವ ಬುಡಕಟ್ಟು ಜನಾಂಗದ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಬಹು ದೊಡ್ಡ ಹುನ್ನಾರ ನಡೆಯುತ್ತಿದ್ದು, ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ.

ಮಂಗಳವಾರ ನಗರದ ಕಬ್ಬನ್‌ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಚಳವಳಿಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮವನ್ನು ಸರಕಾರ ಕೈಬಿಡಬೇಕೆಂದು ಕೋರಿದರು.

ಅರಣ್ಯವಾಸಿಗಳ ಹಕ್ಕು ಕಾಯ್ದೆಯಡಿ ಬುಡಕಟ್ಟು ಜನಾಂಗದವರು ಸಲ್ಲಿಸಿದ ಅರ್ಜಿಗಳನ್ನು ಅರಣ್ಯ ಉಪವಿಭಾಗ ಸಮಿತಿ ತಿರಸ್ಕರಿಸಿರುವ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕುಣಬಿ, ಗವಳಿ, ನಾಯ್ಕ, ಬೋವಿ, ಸಿದ್ಧಿ, ಹಾಲಕ್ಕಿ ಮೊದಲಾದ ಬುಡಕಟ್ಟು ಜನರೂ ಸೇರಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.

ಜಿಲ್ಲೆಯ ಒಟ್ಟೂ ಜನಸಂಖ್ಯೆಯ ಮೂರನೇ ಒಂದು ಭಾಗ ಅರಣ್ಯವಾಸಿಗಳಾಗಿದ್ದು, ಕೆಲವರು ತಲತಲಾಂತರದಿಂದ ಅರಣ್ಯದಲ್ಲಿಯೆ ಬದುಕು ಕಟ್ಟಿಕೊಂಡಿದ್ದರೆ, ಮತ್ತೆ ಕೆಲವರು ಕನಿಷ್ಠ 20 ವರ್ಷಗಳಿಂದ ಅರಣ್ಯದಲ್ಲೆ ವಾಸವಿದ್ದಾರೆ. ಆದರೆ, ನಮಗೆ ಅಲ್ಲಿರಲು ಅನರ್ಹರು ಎನ್ನುವುದಾದರೆ ಬದಲಿ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿ ಸರಕಾರದ್ದೆ ಆಗುತ್ತದೆ ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಗ್ರಾಮಿಣ ಭಾಗದ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಸಲ್ಲಿಸಿರುವ ಒಟ್ಟು 87,625 ಅರ್ಜಿಗಳ ಪೈಕಿ 65,220 ಅರ್ಜಿಗಳು, ಅಂದರೆ ಶೇ.74.43 ತಿರಸ್ಕೃತವಾಗಿವೆ. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಜಿಲ್ಲೆಯಲ್ಲಿನ 1331 ಬುಡಕಟ್ಟು, 394 ಪಾರಂಪರಿಕ ಅರಣ್ಯ ವಾಸಿಗಳಿಗೆ ಹಾಗೂ ಸಮುದಾಯ ಉದ್ದೇಶಕ್ಕೆ 1127 ಹೀಗೆ ಒಟ್ಟು 2852 ಅರಣ್ಯವಾಸಿಗಳಿಗೆ (ಶೇ.3.25) ಮಾತ್ರ ಹಕ್ಕುಪತ್ರ ಪ್ರಾಪ್ತಿಯಾಗಿದೆ ಎಂದು ವೇದಿಕೆ ಅಧ್ಯಕ್ಷೆ ಎ.ರವೀಂದ್ರ ನಾಯ್ಕ ವಿವರಿಸಿದರು.

ಮತದಾನ ಬಹಿಷ್ಕಾರ

ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಬಗೆಹರಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ವಿಫಲವಾದಲ್ಲಿ ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನೂರಾರು ಅರಣ್ಯವಾಸಿಗಳು ಎಚ್ಚರಿಕೆ ನೀಡಿದರು.

ಬೇಡಿಕೆಗಳು

* ಹಕ್ಕುಪತ್ರ ಪಡೆಯಲು ವಿಫಲರಾದವರಿಗೆ ಬದಲೀ ವ್ಯವಸ್ಥೆಯಾಗಬೇಕು.

* ಅರಣ್ಯ ಹಕ್ಕು ಕಾಯ್ದೆ ಅರ್ಜಿ ವಿಚಾರಣೆಯಲ್ಲಿ ಇರುವಂಥ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಕಲಂ 64ಎ ಅಡಿಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಅರಣ್ಯಾಧಿಕಾರಿಗಳಿಗೆ ಆದೇಶಿಸಬೇಕು.

* ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕರಿಸಿದ ಅರ್ಜಿಗಳನ್ನು ಮರು ಪರಿಶೀಲಿಸಿ ಹಕ್ಕುಪತ್ರಗಳನ್ನು ಒದಗಿಸಬೇಕು.

‘ಕಾಗೋಡು ಬೆಂಬಲ’

ಅರಣ್ಯ ವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿ, ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮರು ಪರಿಶೀಲಿಸಿ ಹಕ್ಕುಪತ್ರಗಳನ್ನು ಒದಗಿಸುವ ಕುರಿತು ಹಾಗೂ ಒಕ್ಕಲೆಬ್ಬಿಸದಂತೆ ಸರಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News