ವಕೀಲರಿಗೆ ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ರಾಜಭವನ ಚಲೋ

Update: 2019-02-12 17:03 GMT

ಬೆಂಗಳೂರು, ಫೆ.12: ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್ ಕರೆ ನೀಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆಂಬಲಿಸಿ, ನೂರಾರು ವಕೀಲರು ರಾಜಭವನ ಚಲೋ ನಡೆಸಿದರು.

ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಸಿವಿಲ್ ಕೋರ್ಟ್ ಮುಂಭಾಗ ಬೆಂಗಳೂರು ವಕೀಲರ ಸಂಘ ನೇತೃತ್ವದಲ್ಲಿ ಜಮಾಯಿಸಿದ ವಕೀಲರು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು.

ತಾಲೂಕು ನ್ಯಾಯಾಲಯದಿಂದ ಹಿಡಿದು ಉಚ್ಚ ನ್ಯಾಯಾಲದವರೆಗೆ ಲಕ್ಷಾಂತರ ವಕೀಲರು ಬದುಕಿನ ಪ್ರತಿ ಕ್ಷಣದಲ್ಲೂ ತಮ್ಮ ಜೀವವನ್ನೂ ಲೆಕ್ಕಿಸದೇ ವೃತ್ತಿಯನ್ನು ಮಾಡುತ್ತಿದ್ದಾರೆ. ಅವರ ಮೇಲೆ, ಸಾಕಷ್ಟು ಹಲ್ಲೆ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಎದುರಿಸಿಕೊಂಡೇ ಮುಂದುವರೆಯುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಕೀಲರು ಹೇಳಿದರು.

ವಕೀಲಿಕೆ ಮಾಡಲು ಪದವಿ ಮುಗಿಸಿ ನೋಂದಣಿ ಮಾಡಿಕೊಂಡ ಹೊಸಬರಿಗೆ ಹೆಚ್ಚಿನ ಸಹಾಯಧನ, ವಕೀಲರ ಮೇಲೆ ನಡೆಯುವ ಹಲ್ಲೆ ಕೊಲೆಗಳಿಗೆ ಪರಿಹಾರ ಮಾರ್ಗೋಪಾಯಗಳು, ವಕೀಲರ ಸಂಘಗಳಿಗೆ ಕನಿಷ್ಟ ಸರಕಾರಿ ಸೌಲಭ್ಯಗಳು, ವಕೀಲರ ಕಲ್ಯಾಣ ನಿಧಿ ಹೆಚ್ಚಿಸುವುದು, ರಾಜ್ಯ ವಕೀಲರ ಪರಿಷತ್ತಿಗೆ ಸಹಾಯಧನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸರಕಾರ ಮಂಡಿಸಿದ ಬಜೆಟ್‌ನಲ್ಲಿ ವಕೀಲರ ಕುರಿತಾಗಿ ಒಂದು ಮಾತು ಸಹ ನುಡಿದಂತೆ ಕಾಣುತ್ತಿಲ್ಲ. ಅಲ್ಲದೆ, ಈ ವಾರ್ಷಿಕ ಬಜೆಟ್‌ನ ಪ್ರತಿಯಲ್ಲೂ ವಕೀಲರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹೀಗಾಗಿ, ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಹಿರಿಯ ವಕೀಲರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News