ದೇವದಾಸಿ ಮಹಿಳೆಯರಿಗೆ ಸಹಾಯ ಧನ ಹೆಚ್ಚಿಸಲು ಪಟ್ಟು

Update: 2019-02-12 17:05 GMT

ಬೆಂಗಳೂರು, ಫೆ.12: ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನ ಹೆಚ್ಚಳ ಹಾಗೂ ಪುನರ್ವಸತಿಗೆ ಭೂಮಿ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಧರಣಿ ನಡೆಸಲಾಯಿತು.

ಮಂಗಳವಾರ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಫ್ರೀಡಂಪಾರ್ಕ್‌ವರೆಗೂ ಮೆರವಣಿಗೆ ನಡೆಸಿದರು.

ದಲಿತ, ಹಿಂದುಳಿದ ಸಮುದಾಯದ ಕೆಲ ಜಾತಿಯವರು ಮೇಲ್ಜಾತಿಯವರ ಹಾಗೂ ಮೇಲ್ವರ್ಗದವರ ಮೇಲೆಯೆ ಅವಲಂಬಿಸಿರುವುದರಿಂದ ದಯನೀಯ ಪರಿಸ್ಥಿತಿಯಲ್ಲಿಯೇ ಬದುಕುವಂತಾಗಿದೆ.

ಜಾತಿ ತಾರತಮ್ಯ, ದೌರ್ಜನ್ಯದ ದೇವದಾಸಿ ಪದ್ಧತಿ, ಅಸ್ಪೃಶ್ಯಾಚರಣೆ, ದೈಹಿಕ ದಬ್ಬಾಳಿಕೆ ಹಾಗೂ ಬಡತನ ಮುಂದುವರೆಯುತ್ತಿದೆ. ಸರಕಾರ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ದೇವದಾಸಿ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಯು.ಬಸವರಾಜ, ದೇವದಾಸಿ ಮಹಿಳೆಯರು ಮತ್ತು ಕುಟುಂಬಗಳು ಹಲವು ದಶಕಗಳಿಂದ ಕಳೆದುಕೊಂಡಿರುವ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಒದಗಿಸಲು ಸರಕಾರ ವಿಶೇಷ ಒತ್ತು ನೀಡಬೇಕು. ಅನುಕಂಪ ಹಾಗೂ ಮತಗಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುವುದು ಬೇಡವೇ ಬೇಡ. ಜನವಿರೋಧಿ ನೀತಿಗಳನ್ನು ಕೈಬಿಟ್ಟು ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ದೇವದಾಸಿ ಮಹಿಳೆಯರ ಮತ್ತು ಪರಿತ್ಯಕ್ತ ಮಹಿಳೆಯರಿಗೆ ಮಾಸಿಕ ಸಹಾಯಧನವನ್ನು 5 ಸಾವಿರ ರೂ. ಗೆ ಹೆಚ್ಚಿಸಬೇಕು. ರಾಜ್ಯದಾದ್ಯಂತ ದೇವದಾಸಿ ಕುಟುಂಬಗಳ ಸದಸ್ಯರ ಗಣತಿಯನ್ನು ಪುನಃ ನಡೆಸಬೇಕು. ಅಲ್ಲದೇ, ಪುನರ್ವಸತಿಗಾಗಿ ಭೂಮಿ ಒದಗಿಸುವ ಯೋಜನೆಗೆ ಪ್ರತಿ ವರ್ಷ 5 ಸಾವಿರ ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News