ಸದನಕ್ಕೆ ಹಾಜರಾದ ಕಾಂಗ್ರೆಸ್‌ನ ಅತೃಪ್ತ ಶಾಸಕರು, ಪಕ್ಷೇತರರು

Update: 2019-02-13 16:47 GMT

ಬೆಂಗಳೂರು, ಫೆ. 13: ‘ಅತೃಪ್ತ’ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ರಮೇಶ್ ಜಾರಕಿಹೊಳಿ(ಗೋಕಾಕ್), ಬಿ.ನಾಗೇಂದ್ರ(ಬಳ್ಳಾರಿ ಗ್ರಾಮಾಂತರ), ಮಹೇಶ್ ಕುಮಟಳ್ಳಿ(ಅಥಣಿ), ಉಮೇಶ್ ಜಾಧವ್(ಚಿಂಚೋಳ್ಳಿ) ಕೊನೆಗೂ ಸದನಕ್ಕೆ ಆಗಮಿಸಿದ್ದಾರೆ.

ನಿನ್ನೆ ತಡರಾತ್ರಿಯೇ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ನಾಲ್ವರು ಶಾಸಕರು, ‘ಅಸಮಾಧಾನವಿದೆ. ಆದರೆ, ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ಸಿದ್ದರಾಮಯ್ಯನವರೇ ನಮ್ಮ ನಾಯಕ. ಯಾವುದೇ ಕಾರಣಕ್ಕೂ ನಾವು ಪಕ್ಷ ಬಿಡುವುದಿಲ್ಲ’ ಎಂದು ಸ್ಪಷ್ಟಣೆ ನೀಡಿದ್ದಾರೆ.

ಈ ಮಧ್ಯೆ ಮುಂಬೈನಲ್ಲಿ ಗೃಹ ಬಂಧನದಲ್ಲಿದ್ದಾರೆಂದು ಹೇಳಲಾಗಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ(ಕೆ.ಆರ್.ಪೇಟೆ) ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಷೇತರ ಶಾಸಕರಾದ ಶಂಕರ್ (ರಾಣೆಬೆನ್ನೂರು), ನಾಗೇಶ್ (ಮುಳುಬಾಗಿಲು) ಸದನಕ್ಕೆ ಹಾಜರಾಗುವ ಮೂಲಕ ತೀವ್ರ ರಾಜಕೀಯ ಕುತೂಹಲ ಸೃಷ್ಟಿಸಿದರು.

ಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ‘ಆಪರೇಷನ್ ಕಮಲ’ದ ಹಾವು-ಏಣಿ ಆಟ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿ ನಡುವಿನ ಹಗ್ಗ ಜಗ್ಗಾಟಕ್ಕೆ ಒಂದು ರೀತಿಯಲ್ಲಿ ತಾತ್ಕಾಲಿಕ ತೆರೆ ಬಿದ್ದಂತೆ ಆಗಿದೆ. ಈ ನಡುವೆ ಆಡಿಯೋ ವಿವಾದವೂ ರಾಜಕೀಯ ತಿರುವುಗಳಿಗೆ ಸಾಕ್ಷಿಯಾಗಿದೆ.

ಅತೃಪ್ತನಲ್ಲ: ‘ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಅತೃಪ್ತರ ಜತೆಯೂ ಗುರುತಿಸಿಕೊಂಡಿಲ್ಲ. ನನಗೆ ಅಸಮಾಧಾನವಿದ್ದದ್ದು ಸತ್ಯ. ಅದು ವಿಕೋಪಕ್ಕೆ ಹೋಗಿತ್ತು. ಸ್ಪೀಕರ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಜತೆ ಮಾತನಾಡಿದ್ದು, ಯಾವುದೇ ಕಾರಣಕ್ಕೆ ಪಕ್ಷವನ್ನು ತ್ಯಜಿಸುವುದಿಲ್ಲ’ ಎಂದು ಶಾಸಕ ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ಹೀರೋ ಮಾಡಿದ್ದೀರಿ: ನನಗೆ ಅಸಮಾಧಾನವಿದೆ. ಆದರೆ, ನಾನು ಹೈಕಮಾಂಡ್‌ಗೆ ಯಾವುದೇ ಸವಾಲು ಹಾಕಿಲ್ಲ. ನನ್ನ ಪುತ್ರನ ಮದುವೆ ಹಿನ್ನೆಲೆಯಲ್ಲಿ ಸದನಕ್ಕೆ ಬರಲು ಸಾಧ್ಯವಾಗಿಲ್ಲ. ನನ್ನನ್ನು ನಾಯಕ, ಖಳನಾಯಕ ಮಾಡಿ, ಇದೀಗ ಏಕಾಂಗಿ ಮಾಡಿದ್ದೀರಿ. ಇದೆಲ್ಲವನ್ನು ಮಾಡಿದ್ದೇ ನೀವು(ಮಾಧ್ಯಮ). ಬಿಜೆಪಿ ಶಾಸಕ ಅಶ್ವಥ್ ನಾರಾಯಣ ನನ್ನ ಮಿತ್ರ. ಅವರ ಮನೆಗೆ ಹೋದರೆ ತಪ್ಪೇನು. ಮತ್ತೆ ಮುಂಬೈಗೆ ಹೋಗುತ್ತೇವೆ’ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಪಕ್ಷ ಬಿಡುವುದಿಲ್ಲ: ನಾನು ಯಾವುದೇ ಕಾರಣಕ್ಕೆ ಪಕ್ಷ ಬಿಡುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಸಿಎಲ್‌ಪಿಗೆ ಗೈರು ಹಾಜರಿಯ ಬಗ್ಗೆ ಕಾರಣ ನೀಡಿದ್ದೇನೆ. ನನ್ನ ಸ್ಪಷ್ಟಣೆಯಲ್ಲಿ ತಪ್ಪಿದ್ದರೆ ಕ್ರಮ ಕೈಗೊಳ್ಳಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ಸಿದ್ದರಾಮಯ್ಯನವರೇ ನಮ್ಮ ನಾಯಕ. ನಾನು ಯಾರನ್ನು ಭೇಟಿ ಮಾಡಿಲ್ಲ’ ಎಂದು ಶಾಸಕ ಉಮೇಶ್ ಜಾಧವ್ ಸ್ಪಷ್ಟಪಡಿಸಿದ್ದಾರೆ.

‘ನಾನು ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಬಿಜೆಪಿಯವರು ಸಿಎಂ ಮಾಡ್ತೀವಿ ಅಂದ್ರೂ ನಾನು ಆ ಪಕ್ಷಕ್ಕೆ ಹೋಗುವುದಿಲ್ಲ. ಅನಾರೋಗ್ಯದಿಂದ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ನನ್ನನ್ನು ಖರೀದಿಸುವ ತಾಕತ್ತು ಬಿಜೆಪಿಗಿಲ್ಲ. ಬಿಜೆಪಿಯ 10 ಮಂದಿ ಶಾಸಕರನ್ನು ಕರೆ ತರುವ ಸಾಮರ್ಥ್ಯ ನನಗಿದೆ. ಮುಂಬೈನಲ್ಲಿ ನನ್ನ ವ್ಯವಹಾರವಿದ್ದ ಕಾರಣ ಅಲ್ಲಿಗೆ ತೆರಳಿದ್ದೆ’

-ನಾರಾಯಣಗೌಡ, ಜೆಡಿಎಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News