ರಾಜ್ಯ ಮುಂಗಡಪತ್ರದಲ್ಲಿ ಶಿಕ್ಷಣಕ್ಕೆ ದಕ್ಕಿದ್ದೇನು?

Update: 2019-02-14 05:56 GMT

ಸರಕಾರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಸಬಲೀಕರಣಕ್ಕೆ ಮತ್ತು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಯಾವುದೇ ಆಸಕ್ತಿಯಾಗಲಿ, ಇಚ್ಛಾಶಕ್ತಿಯಾಗಲಿ ಇಲ್ಲವೆಂದು ಮುಂಗಡಪತ್ರ ಸಾಬೀತುಪಡಿಸುತ್ತದೆ. ಒಟ್ಟಿನಲ್ಲಿ ಶಿಕ್ಷಣದ ಕುರಿತಾಗಿ ನಿರಾಸೆಗೊಳಿಸುವ, ಭವಿಷ್ಯದ ಕುರಿತಾಗಿ ಆತಂಕ ಹುಟ್ಟಿಸುವ ಮುಂಗಡಪತ್ರ ನೀಡಿದ್ದಾರೆ.

ಕುಮಾರಸ್ವಾಮಿಯವರು ಮಂಡಿಸಿದ 2019-20ನೇ ಸಾಲಿನ ಮುಂಗಡಪತ್ರದ ಒಟ್ಟು ಗಾತ್ರ 2,34,153 ಲಕ್ಷ ಕೋಟಿ. ಕಳೆದ ಸಾಲಿನ 2018-19 ಬಜೆಟ್‌ನ ಒಟ್ಟು ಮೊತ್ತ 2.18 ಲಕ್ಷ ಕೋಟಿ. 2017-18 ಸಾಲಿನಲ್ಲಿ ಇದರ ಮೊತ್ತ 1.86 ಲಕ್ಷ ಕೋಟಿ ಇದ್ದರೆ 2016-17ರಲ್ಲಿ 1.63 ಲಕ್ಷ ಕೋಟಿ ಇತ್ತು. ಈ ಬಾರಿ 2019-20ರಲ್ಲಿ ಈ ಬಾರಿ ಶಿಕ್ಷಣಕ್ಕೆ 26,580 ಕೋಟಿ ಮೀಸಲಿಟ್ಟಿದ್ದಾರೆ. ಆದರೆ 13 ಮಠಗಳಿಗೆ 35,000 ಕೋಟಿ ಮೀಸಲಿಟ್ಟಿದ್ದಾರೆ. ಅಂದರೆ ಶಿಕ್ಷಣಕ್ಕಿಂತಲೂ ಮಠಗಳಿಗೆ 9,500 ಕೋಟಿ ಹೆಚ್ಚು ಹಣ ಕೊಟ್ಟಿದ್ದಾರೆ. ಇದು ದುರಂತ. ಕಳೆದ ಸಾಲಿನ 2018-19 ರ ಸಾಲಿನ ಮುಂಗಡಪತ್ರದಲ್ಲಿ ಶಿಕ್ಷಣಕ್ಕೆ 26,000 ಕೋಟಿ ಮೀಸಲಿಟ್ಟಿದ್ದರು. 2017-18 ಸಾಲಿನಲ್ಲಿ ಶಿಕ್ಷಣಕ್ಕೆ 20,000 ಕೋಟಿ ಮೀಸಲಿಟ್ಟಿದ್ದರೆ 2016-17ರಲ್ಲಿ 22,000 ಕೋಟಿ ಮೀಸಲಿಟ್ಟಿದ್ದರು. ಅಂದರೆ ಸ್ಥೂಲವಾಗಿ ಕಳೆದ ಮೂರು ವರ್ಷಗಳ ಬಜೆಟ್ ಅನ್ನು ಅವಲೋಕಿಸಿದಾಗ ಶಿಕ್ಷಣ ವಲಯದ ಕುರಿತಾಗಿ ಸರಕಾರಕ್ಕಿರುವ ಅಸಡ್ಡೆ, ನಿರ್ಲಕ್ಷ ನಮಗೆ ಸ್ಪಷ್ಟವಾಗುತ್ತದೆ. (ಮೀಸಲಿಟ್ಟ ಹಣ ಅಲ್ಲಿನ ಶಿಕ್ಷಕರು, ಇತರ ಸಿಬ್ಬಂದಿಯ ವೇತನ ಮತ್ತು ದೈನಂದಿನ ವೆಚ್ಚಕ್ಕೆ ಸಾಕಾಗುತ್ತದೆ. ಬದಲಿಗೆ ಶಿಕ್ಷಣಕ್ಕೆ ಕನಿಷ್ಠ 34,000 ಕೋಟಿ ರೂ. ಮೀಸಲಿಡಬೇಕಾಗುತ್ತದೆ. ಶಾಲೆಯ ಮೂಲಭೂತ ಸೌಕರ್ಯವನ್ನು ಅನುಷ್ಠಾನಗೊಳಿಸಲು ಮತ್ತು ನಿರ್ವಹಣ ವೆಚ್ಚವಾಗಿ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 50,000 ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 1 ಲಕ್ಷ ಮೊತ್ತವನ್ನು ಆಯವ್ಯಯದಲ್ಲಿ ಮೀಸಲಿಡಬೇಕಾಗುತ್ತದೆ. ಪ್ರತಿ ಶಾಲೆಗೂ ಕಲಿಕ ಬೋಧನಾ ಉಪಕರಣಗಳಿಗಾಗಿ 10,000 ರೂ.ಗಳನ್ನು ನೀಡಬೇಕು)

ಮೊದಲಿಗೆ ನಿರಾಸೆ ಮೂಡಿಸುವ ವಿಷಯವೆಂದರೆ ಕಲಿಕೆಯ ಹಿರಿಮೆಗೆ ಯಾವುದೇ ಮಹತ್ವವನ್ನು ಕೊಟ್ಟಿಲ್ಲ. ಪ್ರಾಥಮಿಕ, ಪ್ರೌಢ ಶಿಕ್ಷಣದ ಕಲಿಕೆಯ ಗುಣಮಟ್ಟ ಉತ್ತಮಪಡಿಸಲು ಆಯವ್ಯಯದಲ್ಲಿ ಹೇಳಲಾದ ಅಂಶಗಳಲ್ಲಿ ಯಾವುದೆ ಹೊಸತನವಿಲ್ಲ. ತುಂಬಾ ಜಾಳುಜಾಳಾಗಿದೆ

 ಈ ಬಾರಿ 2019-20ರ ಮುಂಗಡಪತ್ರದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ (1500 ಶಾಲಾ ಕೊಠಡಿ, ಮೇಲ್ಛಾವಣಿ ಇತ್ಯಾದಿ) 1200 ಕೋಟಿ ಮೀಸಲಿಟ್ಟಿದ್ದಾರೆ. ಕಳೆದ ಬಾರಿ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 150 ಕೋಟಿ ಮೀಸಲಿಟ್ಟಿದ್ದರು. ಆದರೆ ಕಳೆದ ಏಳು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಗೋಚರಿಸಿಲ್ಲ. ಹೀಗಾಗಿ ಈ ಬಾರಿಯೂ ಮೂಲಭೂತ ಸೌಕರ್ಯವು ಉತ್ತಮಗೊಳ್ಳುತ್ತದೆ ಎನ್ನುವ ನಿರೀಕ್ಷೆ ಇಲ್ಲ. ಇದು ಕೇವಲ ಅಂಕಿ ಅಂಶಗಳ ಮೇಲಾಟವಷ್ಟೇ.

 ಕಳೆದ ಬಾರಿ ಆಯ್ದ 4,100 ಸರಕಾರಿ ಶಾಲೆಗಳಿಗೆ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಗೊಳಿಸಲಾಗುವುದು ಎಂದು ಹೇಳಿದ್ದರು. ಹಂತಹಂತವಾಗಿ ಪೂರ್ವಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದರು. ಆದರೆ ಇಂದಿಗೂ ಕಾರ್ಯಗತಗೊಂಡಿಲ್ಲ. ಈ ಬಾರಿ 2019-20ನೇ ಸಾಲಿನ ಮುಂಗಡಪತ್ರದಲ್ಲಿ ಇದರ ಪ್ರಸ್ತಾಪವೆ ಇಲ್ಲ. ಈ ಬಾರಿ 3,389 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಮೂರು ತಿಂಗಳ ಹಿಂದೆ ನಡೆದ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಸುಮಾರು 2,800 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. (ಅದು ಇನ್ನೂ ವಿವಾದದಲ್ಲಿದೆ). ಆದರೆ ಮುಖ್ಯಮಂತ್ರಿಗಳು 3,389 ಶಿಕ್ಷಕರ ನೇಮಕಾತಿ ಎಂದು ಹೇಳುತ್ತಾರೆ. ಇದು ಈಗಾಗಲೇ ಆಯ್ಕೆಯಾದ ಪಟ್ಟಿಯ ಸಂಖ್ಯೆಯೇ? (ಹಾಗಿದ್ದಲ್ಲಿ ಹೆಚ್ಚುವರಿಯಾಗಿ 1,000 ಶಿಕ್ಷಕರು ಎಲ್ಲಿಂದ ಆಯ್ಕೆಯಾದರು?) ಅಥವಾ ಮುಂದೆ ನೇಮಕಾತಿ ಮಾಡಿಕೊಳ್ಳುವ ಶಿಕ್ಷಕರ ಸಂಖ್ಯೆಯೇ? ಹಾಗಿದ್ದಲ್ಲಿ ಇದರ ಕಾಲಮಿತಿಯೇನು? ವಾಸ್ತವದಲ್ಲಿ 34,000 ಶಿಕ್ಷಕರ ನೇಮಕಾತಿ ಆಗಬೇಕಾಗಿದೆ. ಕಳೆದ ಮೂರು ವರ್ಷಗಳಿಂದ 9,800 ಶಿಕ್ಷಕರ ನೇಮಕಾತಿ ಆಗಿದೆ. ಉಳಿದ ಸುಮಾರು 24,000 ಶಿಕ್ಷಕರ ಹುದ್ದೆ ನೇಮಕಾತಿ ಕುರಿತಾಗಿ ಪ್ರಸ್ತಾಪವೇ ಇಲ್ಲ. ಅದಕ್ಕಾಗಿ ಆಯವ್ಯಯದಲ್ಲಿ ಪ್ರತ್ಯೇಕ ಹಣ ಮೀಸಲಿಡುವ ಪ್ರಸ್ತಾಪವೂ ಇಲ್ಲ. ಇದೇ ಆಮೆಗತಿಯಲ್ಲಿ ಮುಂದುವರಿದರೆ ಉಳಿದ ಶಿಕ್ಷಕರ ನೇಮಕಾತಿಗೆ ದಶಕಗಳೇ ಬೇಕಾಗುತ್ತದೆ. ಶಿಕ್ಷಕರಿಲ್ಲದೆ ಶಾಲೆಗಳು ಉಳಿಯುವುದಾದರೂ ಹೇಗೆ??

2017ರ ಆಯವ್ಯಯದಲ್ಲಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುತ್ತೇವೆ ಎಂದು ಉಲ್ಲೇಖಿಸಿದ್ದರು. 2018 ಆಯವ್ಯಯದಲ್ಲಿ ತನ್ನ ಕಳೆದ ವರ್ಷಗಳ ಸಾಧನೆಯನ್ನು ಉಲ್ಲೇಖಿಸುತ್ತಾ ಸರಕಾರವು 2017ರಲ್ಲಿ 176 ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಿದ್ದೇವೆ ಎಂದು ಹೇಳಿಕೊಂಡಿದೆ. ಇದು ಸುಳ್ಳು ಮಾಹಿತಿ. ಆದರೆ ಕಳೆದ ಎರಡು ವರ್ಷಗಳಲ್ಲಿ ಒಂದು ಹೊಸ ಶಾಲೆಯನ್ನೂ ಪ್ರಾರಂಭಿಸಿಲ್ಲ. ಇನ್ನು ಈ ಬಾರಿಯ ಮುಂಗಡ ಪತ್ರದಲ್ಲಿಯೂ ಸಹ 1,000 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಎಂತಹ ಮರೆಮೋಸ. ಜನರಿಗೆ ಸರಕಾರ ಮಂಕುಬೂದಿ ಎರಚುತ್ತಿದೆ. ಆದರೆ ಈ ರೀತಿ ಸುಳ್ಳುಗಳ ಆವಶ್ಯಕತೆ ಇದೆಯೇ??

ಕ್ರೀಡಾ ವಸತಿಗಳ ನಿರ್ಮಾಣ, ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿಗಳನ್ನು ಕಲ್ಪಿಸುವುದಾಗಿ ಹೇಳಿರುವುದು ಉತ್ತಮ ಬೆಳವಣಿಗೆ. ಆದರೆ ಇದು ಅನುಷ್ಠಾನಗೊಳ್ಳುತ್ತದೆಯೆ ಎಂಬುದೇ ಯಕ್ಷಪ್ರಶ್ನೆ. ಮಕ್ಕಳ ದಾಖಲಾತಿ ಕಡಿಮೆ ಇರುವ, ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ 28,847 ಸರಕಾರಿ ಶಾಲೆಗಳನ್ನು ಹತ್ತಿರದ 8,530 ಸರಕಾರಿ ಶಾಲೆಗಳಲ್ಲಿ ವಿಲೀನಗೊಳಿಸುವುದಾಗಿ ಪ್ರಕಟಿಸಿದರು. (ತೀವ್ರ ಪ್ರತಿಭಟನೆಯ ನಂತರ 8,000 ಶಾಲೆಗಳನ್ನು ಮಾತ್ರ ವಿಲೀನಗೊಳಿಸಲಾಗುವುದು ಎಂದು ಹೇಳಿದರು). ಈ ಬಾರಿ ಶಾಲೆಗಳ ವಿಲೀನದ ಪ್ರಸ್ತಾಪವಿಲ್ಲ. ಅಂದರೆ ಅದನ್ನು ಕೈಬಿಟ್ಟಿದ್ದಾರೆಯೇ? ಒಂದು ವೇಳೆ ನಿಜವಾದಲ್ಲಿ ಇದು ಸಮಾಧಾನಕರ ಅಂಶ

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿವಿ ಮತ್ತು ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಯ ಪ್ರಸ್ತಾಪವಿಲ್ಲ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ರೂಪುರೇಶೆಗಳು, ಕಾರ್ಯಯೋಜನೆಗಳ ಕುರಿತು ಪ್ರಸ್ತಾಪವಿಲ್ಲ.

ಕಳೆದ ಬಾರಿಯ ಪ್ರಸ್ತಾವನೆಗಳು, ಕಾರ್ಯಯೋಜನೆಗಳು ಯಾವುದೂ ಅನುಷ್ಠಾನಗೊಂಡಿಲ್ಲ. ಈ ಬಾರಿಯ ಮುಂಗಡಪತ್ರದಲ್ಲಿ ಶಿಕ್ಷಣಕ್ಕೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಸಂಪೂರ್ಣ ಕಡೆಗಣಿಸಲಾಗಿದೆ. ಹೀಗಾಗಿ ಇವರ ಬದ್ದತೆ ಮತ್ತು ಕಾರ್ಯಕ್ಷಮತೆ ಕುರಿತು ಜನರಲ್ಲಿ ವಿಶ್ವಾಸ ಉಳಿದಿಲ್ಲ. ಒಟ್ಟಾರೆಯಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಬಲೀಕರಣದ ಕುರಿತಾಗಿ ಈ ಸರಕಾರಕ್ಕೆ ಯಾವುದೇ ಬಗೆಯ ಕಾಳಜಿ ಇಲ್ಲ ಎನ್ನುವುದು ಮನದಟ್ಟಾಗುತ್ತದೆ. ಸರಕಾರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಸಬಲೀಕರಣಕ್ಕೆ ಮತ್ತು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಯಾವುದೇ ಆಸಕ್ತಿಯಾಗಲಿ, ಇಚ್ಛಾಶಕ್ತಿಯಾಗಲಿ ಇಲ್ಲವೆಂದು ಇದು ಸಾಬೀತುಪಡಿಸುತ್ತದೆ. ಒಟ್ಟಿನಲ್ಲಿ ಶಿಕ್ಷಣದ ಕುರಿತಾಗಿ ನಿರಾಸೆಗೊಳಿಸುವ, ಭವಿಷ್ಯದ ಕುರಿತಾಗಿ ಆತಂಕ ಹುಟ್ಟಿಸುವ ಮುಂಗಡಪತ್ರ ನೀಡಿದ್ದಾರೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News