ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡ ಮಂಗಳ ಶೋಧಕ ನೌಕೆ ‘ಆಪರ್ಟೂನಿಟಿ’

Update: 2019-02-14 16:03 GMT

ಲಾಸ್ ಏಂಜಲಿಸ್, ಫೆ. 14: ಮಂಗಳ ಗ್ರಹದ ನೆಲದಲ್ಲಿ ಮೂರು ತಿಂಗಳ ಕಾಲ ಚಲಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಶೋಧ ನೌಕೆ ‘ಆಪರ್ಟೂನಿಟಿ’, 15 ವರ್ಷಗಳ ಸುದೀರ್ಘ ಸೇವೆಯ ಬಳಿಕ ಭೂಮಿಯೊಂದಿಗಿನ ಸಂಪರ್ಕವನ್ನು ಕೊನೆಗೊಳಿಸಿದೆ ಎಂದು ನಾಸಾ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಂಗಳ ಗ್ರಹವನ್ನು ಧೂಳಿನ ಬಿರುಗಾಳಿ ಆವರಿಸಿದ ವೇಳೆ, ಕಳೆದ ವರ್ಷದ ಜೂನ್ 10ರಂದು ಸೌರ ಚಾಲಿತ ಶೋಧ ನೌಕೆಯೊಂದಿಗೆ ನಾಸಾ ಇಂಜಿನಿಯರ್‌ಗಳು ಸಂಪರ್ಕ ಕಳೆದುಕೊಂಡಿದ್ದರು. ಅಂದಿನಿಂದ ಈ ನೌಕೆಯೊಂದಿಗೆ ಸಂಪರ್ಕ ಸಾಧಿಸಲು ಇಂಜಿನಿಯರ್‌ಗಳು ನಿರಂತರ ಪ್ರಯತ್ನಗಳನ್ನು ನಡೆಸಿದ್ದಾರೆ.

‘ಪರ್ಸವರೆನ್ಸ್ ವ್ಯಾಲಿ’ ಎಂಬುದಾಗಿ ಕರೆಯಲ್ಪಡುವ ಸ್ಥಳದಲ್ಲಿ ‘ಆಪರ್ಟೂನಿಟಿ’ ಇದ್ದಾಗ ಬಿರುಗಾಳಿ ಬೀಸಿತ್ತು. ದಟ್ಟ ಧೂಳಿನ ಕಣಗಳು ಶೋಧ ನೌಕೆಯನ್ನು ಆವರಿಸಿದ ಹಿನ್ನೆಲೆಯಲ್ಲಿ ಅದರ ಸೌರಫಲಕಗಳಿಗೆ ಸೂರ್ಯನ ಬಿಸಿಲು ಸಿಗದೆ ಅದರ ವ್ಯವಸ್ಥೆ ಕುಸಿದು ಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಗಳನ ನೆಲದಲ್ಲಿ ಒಂದು ಕಿಲೋಮೀಟರ್ ಚಲಿಸುವುದಕ್ಕಾಗಿ ನೌಕೆಯನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಅದು 45 ಕಿಲೋಮೀಟರ್‌ಗೂ ಅಧಿಕ ಅಂತರವನ್ನು ಕ್ರಮಿಸಿದೆ. ಕೆಂಪು ಗ್ರಹಕ್ಕೆ (ಮಂಗಳ) ಕಳುಹಿಸಲಾದ ಯಾವುದೇ ನೌಕೆಗಿಂತ ಹೆಚ್ಚಿನ ಅವಧಿಯನ್ನು ಅದು ಗ್ರಹದಲ್ಲಿ ಕಳೆದಿದೆ.

ಮಂಗಳವಾರ, ‘ಆಪರ್ಟೂನಿಟಿ’ಗೆ ಮರುಜೀವ ನೀಡುವ ಕೊನೆಯ ಪ್ರಯತ್ನವಾಗಿ ಇಂಜಿನಿಯರ್‌ಗಳು ಟ್ರಾನ್ಸ್‌ಮಿಶನ್ ಕಳುಹಿಸಿದರು. ಆದರೆ, ಅವರಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ನಾಸಾದ ವಿಜ್ಞಾನ ಮಿಶನ್ ನಿರ್ದೇಶನಾಲಯದ ಅಸೋಸಿಯೇಟ್ ಅಡ್ಮಿನಿಸ್ಟ್ರೇಟರ್ ಥಾಮಸ್ ಝರ್ಬಚನ್ ತಿಳಿಸಿದರು.

ಪ್ರಾಚೀನ ಕಾಲದಲ್ಲಿ ನೀರಿತ್ತು ಎನ್ನುವುದಕ್ಕೆ ಪುರಾವೆ ನೀಡಿತ್ತು

ಪ್ರಾಚೀನ ಕಾಲದಲ್ಲಿ ಮಂಗಳ ಗ್ರಹ ತೇವಾಂಶದಿಂದ ಕೂಡಿತ್ತು ಹಾಗೂ ಬೆಚ್ಚಗಿತ್ತು ಎಂಬುದಕ್ಕೆ ‘ಆಪರ್ಟೂನಿಟಿ’ ಪುರಾವೆ ಸಂಗ್ರಹಿಸಿತ್ತು. ಹಾಗಾಗಿ, ಅಂದು ಈ ಗ್ರಹವು ಜೀವಿಗಳ ವಾಸಕ್ಕೆ ಪೂರಕವಾಗಿತ್ತು ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ನೌಕೆಯು ಮಂಗಳ ಗ್ರಹದಲ್ಲಿ 2004 ಜನವರಿಯಲ್ಲಿ ಇಳಿದಿತ್ತು. ಅಂದಿನಿಂದ 15 ವರ್ಷಗಳ ಅವಧಿಯಲ್ಲಿ ಅದು 2,17,594 ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ.

‘ಆಪರ್ಟೂನಿಟಿ’ ಯೋಜನೆಗೆ ಒಂದು ಬಿಲಿಯ ಡಾಲರ್ (ಸುಮಾರು 7,100 ಕೋಟಿ ರೂಪಾಯಿ) ವೆಚ್ಚ ತಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News