ಪುಲ್ವಾಮ ಆತ್ಮಹತ್ಯಾ ಬಾಂಬರ್ ವಾಸವಿದ್ದುದು ಎಲ್ಲಿ ಗೊತ್ತೇ?

Update: 2019-02-15 03:43 GMT

ಜಮ್ಮು, ಫೆ.15: ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ದಾಳಿ ನಡೆಸಿ 50ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ (22) ದಕ್ಷಿಣ ಕಾಶ್ಮೀರದ ನುಸುಳುಕೋರರ ತಾಣ ಎನಿಸಿದ ಪುಲ್ವಾಮ ಜಿಲ್ಲೆಯ ಗುಂಡಿಬಾಗ್ ಗ್ರಾಮದವನಾಗಿದ್ದು, ಅರ್ಧದಿಂದ ಶಾಲೆ ತೊರೆದಿದ್ದ ಎನ್ನುವುದು ಪೊಲೀಸ್ ದಾಖಲೆಗಳಿಂದ ತಿಳಿದುಬರುತ್ತದೆ.

ಜೈಶೇ ಮುಹಮ್ಮದ್ ಸಂಘಟನೆ ಈತನಿಗೆ ವಕಾಸ್ ಕಮಾಂಡೊ ಎಂದು ಹೆಸರಿಸಿತ್ತು. 2017ರ ಮಾರ್ಚ್‌ನಲ್ಲಿ ಈತ ಸ್ಥಳೀಯ ಗುಂಡಿಬಾಗ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆ ಬಿಟ್ಟಿದ್ದ. ಈ ಸ್ಥಳ ಘಟನೆ ದುಷ್ಕೃತ್ಯ ನಡೆದ ಸ್ಥಳದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಈತ 2018ರಲ್ಲಿ ಉಗ್ರಗಾಮಿ ಸಂಘಟನೆ ಸೇರಿದ್ದು, ಈತನನ್ನು ಸಿ ವರ್ಗದ ಉಗ್ರ ಎಂದು ಪರಿಗಣಿಸಲಾಗಿತ್ತು. ಜೆಇಎಂ, ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಎಲ್‌ಇಟಿ ಸಂಘಟನೆಗಳ ಜತೆ ಈತ ಕಾಣಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. "ಈಗ ಮೇಲಿನ ಹಂತದ ಉಗ್ರನಾಗಿರಲಿಲ್ಲ. 2018ರಿಂದ ನಾಪತ್ತೆಯಾಗಿದ್ದ ಈತ ಪುಲ್ವಾಮದ ಇತರ ಮಾಮೂಲಿ ಉಗ್ರರಂತೆ ಇದ್ದ" ಎಂದು ತಿಳಿಸಿದ್ದಾರೆ.

ನಾಪತ್ತೆಯಾಗುವ ಮುನ್ನ ಸ್ಥಳೀಯ ಜೋಡಣೆ ಮಿಲ್‌ನಲ್ಲಿ ಕೆಲಸಕ್ಕಿದ್ದ. ಈತನ ತಂದೆ ರಿಯಾರ್ ಅಹ್ಮದ್ ದರ್, ಸ್ಥಳೀಯವಾಗಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ಈತನ ಸೋದರ ಸಂಬಂಧಿ ಉಗ್ರನೊಬ್ಬ ಎನ್‌ಕೌಂಟರ್‌ನಲ್ಲಿ ಹತನಾದ ಬಳಿಕ ಈತನೂ ಶಾಲೆ ತೊರೆದಿದ್ದ. ಈ ಆತ್ಮಹತ್ಯಾ ದಾಳಿಯ ಸುದ್ದಿ ಹರಡುತ್ತಿದ್ದಂತೆ ಗುಂಡಿಬಾಗ್‌ನಲ್ಲಿ ಸೇರಿದ ಜನ ಈತನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಆದರೆ ಯಾವುದೇ ಸರ್ಕಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.

ಈತ ಜೆಇಎಂ ನೇಮಕ ಮಾಡಿಕೊಂಡ ಮೂರನೇ ಸ್ಥಳೀಯ ಆತ್ಮಹತ್ಯಾ ದಾಳಿಕೋರನಾಗಿದ್ದಾನೆ. ಇದಕ್ಕೂ ಮುನ್ನ ಫರ್ದೀನ್ ಅಹ್ಮದ್ ಖಾನ್ (16) ಹಾಗೂ ಅಫಕ್ ಅಹ್ಮದ್ ಶಾ (17) ಎಂಬಿಬ್ಬರನ್ನು ಜೆಇಎಂ ನೇಮಕ ಮಾಡಿಕೊಂಡಿತ್ತು. ಈ ಇಬ್ಬರು ಕ್ರಮವಾಗಿ 2017ರ ಡಿಸೆಂಬರ್ 31 ಹಾಗೂ 2000ನೇ ಇಸ್ವಿಯಲ್ಲಿ ಹತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News