'ಕಾಂಗ್ರೆಸ್ ವಕ್ತಾರನನ್ನು ಹತ್ಯೆ ಮಾಡಿ' ಎಂದ ಮಧುಗಿರಿ ಮೋದಿ ವಿರುದ್ಧ ದೂರು ದಾಖಲು

Update: 2019-02-15 14:27 GMT
ಕೆಪಿಸಿಸಿ ವಕ್ತಾರ ನಟರಾಜ ಗೌಡ

ಬೆಂಗಳೂರು, ಫೆ.15: ಕೆಪಿಸಿಸಿ ವಕ್ತಾರ ನಟರಾಜ ಗೌಡ ಅವರನ್ನು ಹತ್ಯೆ ಮಾಡಿ, ನೋಡಿಕೊಳ್ಳುತ್ತೇನೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಆರೋಪ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಉಗ್ರರ ದಾಳಿ ಸಂಬಂಧ ಖಾಸಗಿ ಕನ್ನಡ ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಗುರುವಾರ ನಟರಾಜ ಗೌಡ ಅವರು, ದಾಳಿಗೆ ಕೇಂದ್ರ ಸರಕಾರದ ವೈಫಲ್ಯವೇ ಕಾರಣವೆಂದಿದ್ದರು.

ಈ ಹೇಳಿಕೆಯನ್ನು ತಿರುಚಿ, ‘ಹಿಂದೂ ಸಾಮ್ರಾಟ್, ಧರ್ಮ ಸೇನೆ’ ಹೆಸರಿನ ಫೇಸ್‌ಬುಕ್ ಪುಟದ ಆಡ್ಮಿನ್ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿ ಎಂಬಾತ ನಟರಾಜ ಗೌಡರನ್ನು ಹತ್ಯೆ ಮಾಡಿ ಎಂದು ಪ್ರಚೋದನೆ ನೀಡುವ ವಿಡಿಯೋ ಹರಿಬಿಟ್ಟಿದ್ದಾನೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಶುಕ್ರವಾರ ಸೈಬರ್ ಕ್ರೈಂ ಪೊಲೀಸರಿಗೆ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು ಸಲ್ಲಿಸಿದ್ದಾರೆ.

ಅತುಲ್ ಕುಮಾರ್ ಹರಿಬಿಟ್ಟಿರುವ ಪ್ರಚೋದನೆ ವಿಡಿಯೋಗಳನ್ನು, ಗುರುಮೂರ್ತಿ ಹಿರೇಮಠ್, ಕರುನಾಡವಾಣಿ, ವೆಂಕಟಪ್ಪ ವೆಂಕಟಪ್ಪ ಹೆಸರಿನ ಫೇಸ್‌ಬುಕ್ ಪುಟಗಳು ಹಂಚಿಕೆ(ಶೇರ್) ಮಾಡಿದ್ದು, ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯ ಮಾಡಲಾಗಿದೆ.

‘ಕಿಡಿಗೇಡಿ ವಿರುದ್ಧ ಕ್ರಮ ಕೈಗೊಳ್ಳಿ’

ಮಧುಗಿರಿ ಮೋದಿ ಎಂಬಾತ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಹೊರಟ್ಟಿದ್ದಾನೆ. ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.

-ನಟರಾಜ ಗೌಡ, ಕೆಪಿಸಿಸಿ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News