ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ: ಶಾಶ್ವತ ಪರಿಹಾರಕ್ಕೆ ಪ್ರಗತಿಪರ ಸಂಘಟನೆಗಳ ಆಗ್ರಹ

Update: 2019-02-15 14:35 GMT

ಬೆಂಗಳೂರು, ಫೆ.15: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೋರದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಖಂಡಿಸಿ ರಾಜಕೀಯ ನೆಲೆಯಲ್ಲಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಪುರಭವನದ ಮುಂಭಾಗ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಆತ್ಮಹತ್ಯಾ ದಾಳಿಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಕೇಂದ್ರ ಸರಕಾರ ಕಾಶ್ಮೀರದಲ್ಲಿನ ರಾಜಕೀಯ ಸಮಸ್ಯೆಗೆ ಶೀಘ್ರವೇ ಪರಿಹಾರ ಕ್ರಮಗಳನ್ನು ಕೈಗೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ದೇಶದ ಸೈನಿಕರನ್ನು ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಒತ್ತಾಯಿಸಿದರು.

ಗಡಿ, ದೇಶ ಹಾಗೂ ರಾಜ್ಯದಲ್ಲಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಹಿಂಸಾಚಾರವೇ ಮಾರ್ಗವಲ್ಲ. ಕಾಶ್ಮೀರ ವಿವಾದವನ್ನು ಪಾಕಿಸ್ತಾನ ಸಹಿತ ವಿದೇಶಿ ಶಕ್ತಿಗಳು ತಮ್ಮ ಹಿತಾಸಕ್ತಿಗಳ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕಾಶ್ಮೀರದ ಸಮಸ್ಯೆಗೆ ಪ್ರತೀಕಾರದಿಂದ ಪರಿಹಾರ ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಗಡಿರೇಖೆಗಳಿಂದಾಚೆ ಹಲವು ದೇಶಗಳ ಮಧ್ಯೆ ನಡೆಯುತ್ತಿರುವ ಈ ರೀತಿಯ ಕದನಗಳು, ಭಯೋತ್ಪಾದನೆಯ ಕೃತ್ಯಗಳು ಮಾನವೀಯತೆಯ ಮೌಲ್ಯಗಳನ್ನೇ ಹೊಸಕಿ ಹಾಕುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.

ಎಲ್ಲ ರಾಷ್ಟ್ರಗಳೂ ರಾಜಕೀಯ ನೆಲೆಯಲ್ಲಿ ಗಂಭೀರವಾಗಿ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಾಣಬೇಕಾದ ಅಗತ್ಯವಿದೆ. ಇದು ಈ ಹಿಂದೆಯೇ ನಡೆಯಬೇಕಾದ ಅಗತ್ಯವಿತ್ತು, ಈಗಲೂ ನಡೆಯದಿದ್ದರೆ ಮುಂದೆಂದೂ ನಡೆಯದ ಸ್ಥಿತಿ ನಿರ್ಮಾಣವಾಗಬಹುದು. ಶಾಂತಿ ಸೌಹಾರ್ದತೆಯನ್ನು ಸಾರಿದ ನಾಡಿನಲ್ಲಿ ರಕ್ತ ಚೆಲ್ಲುವ, ಹಿಂಸೆಯ ಬೀಜ ಬೆಳೆದು ಹೆಮ್ಮರವಾಗಿ ಬೇರು ಬಿಡುತ್ತಿದೆ. ಇದು ಇನ್ನೂ ಮುಂದುವರಿಯದ ರೀತಿಯಲ್ಲಿ ಕಾಪಾಡಬೇಕಾದ ಜವಾಬ್ದಾರಿ ನಮ್ಮೆಲ್ಲರದು.

ಈ ಹಿನ್ನೆಲೆಯಲ್ಲಿ ಪ್ರತಿಕಾರದ ಮಾತು ಇನ್ನಷ್ಟು ಜೀವಗಳ ಬಲಿ ತೆಗೆದುಕೊಳ್ಳುತ್ತದೆ. ರಕ್ತಪಾತ ನಿಲ್ಲಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಭಾರತ ಸೌಹಾರ್ದಯುತವಾಗಿ ಬದುಕುವ ಸ್ಥಿತಿಗೆ ರಾಜಕೀಯ ನೆಲೆಯ ಮಾತುಕತೆ ಪರಿಹಾರವೆಂದು ಪರಿಗಣಿಸಿ ಮಾತುಕತೆಗೆ ಒತ್ತಡ ತರಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಕೆ.ಪ್ರಕಾಶ್, ದೇಶದಲ್ಲಿ ಗಡಿಕಾಯುವ ಸಲುವಾಗಿ ಅಲ್ಲದೆ ದೇಶ ಭಕ್ತಿಯಿಂದ ಬಡವರ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಸೇನೆ ಸೇರುತ್ತಿದ್ದಾರೆ. ಆದರೆ, ಅವರು ಬೇರೆ ಬೇರೆ ಕಾರಣಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತ ಅನೇಕ ಕುಟುಂಬಗಳಿಂದು ಅನಾಥವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾಕಿಸ್ತಾನವು ಕಾಶ್ಮೀರವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಕಾಶ್ಮೀರದ ಯುವ ಸಮುದಾಯ ಭಯೋತ್ಪಾದಕ ಸಂಘಟನೆಗಳನ್ನು ಸೇರಬೇಕು ಎಂಬುದು ಪಾಕಿಸ್ತಾನದ ಆಶಯವಾಗಿದೆ. ಹೀಗಾಗಿ, ಅವರ ಕುತಂತ್ರವನ್ನು ವಿಫಲಗೊಳಿಸಬೇಕಾದರೆ ಭಾರತ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಲೇಖಕ ಶ್ರೀಪಾಧ್ ಭಟ್ ಮಾತನಾಡಿ, ಕಾಶ್ಮೀರದ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ರಾಜಕೀಯ ತೀರ್ಮಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಈ ಸಮಸ್ಯೆಯನ್ನು ಚರ್ಚೆ ಮಾಡಬೇಕು. ಅಲ್ಲದೆ, ನಮ್ಮದು ಬಹು ಸಂಸ್ಕೃತಿ, ಬಹುಭಾಷೆ, ಧರ್ಮ, ಜಾತಿಗಳನ್ನು ಒಳಗೊಂಡಿರುವ ಸೌಹಾರ್ದ ರಾಷ್ಟ್ರವಾಗಿದೆ. ಇದನ್ನು ಅಲ್ಲಿನ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಪ್ರಾಧ್ಯಾಪಕ ಕಿರಣ್ ಗಾಜನೂರು, ಜನವಾದಿ ಮಹಿಳಾ ಸಂಘಟನೆಯ ವಿಮಲಾ, ಡಿವೈಎಫ್‌ಐನ ಬಸವರಾಜ ಪೂಜಾರ, ಎಸ್‌ಎಫ್‌ಐನ ಗುರುರಾಜ್ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News