ಕೇಂದ್ರ ಸರಕಾರ ಉಗ್ರರ ದಾಳಿಯ ಹೊಣೆ ಹೊರಲಿ: ಐವಾನ್ ಡಿಸೋಜಾ

Update: 2019-02-15 14:53 GMT

ಬೆಂಗಳೂರು, ಫೆ.15: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ನಮ್ಮ ದೇಶದ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಘಟನೆಯ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕು ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಆಗದೆ, ದೇಶದ ರಕ್ಷಣೆಗೆ ಕೇಂದ್ರ ಸರಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ತೀವ್ರ ಖಂಡನೀಯ. ಈ ಘಟನೆಯ ಬಳಿಕ ಪ್ರಧಾನಮಂತ್ರಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ದೇಶಕ್ಕೆ ತಿಳಿಸಬೇಕು. 1962ರ ಬಳಿಕ ನಡೆದ ದೊಡ್ಡ ಮಟ್ಟದ ಕುಕೃತ್ಯ ಇದಾಗಿದೆ ಎಂದು ಐವಾನ್ ಡಿಸೋಜಾ ಹೇಳಿದರು.

2019-20ನೇ ಸಾಲಿನ ಆಯವ್ಯಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ 200 ಕೋಟಿ ರೂ. ಅನುದಾನ ಒದಗಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಲು ಸದ್ಯದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕ್ರೈಸ್ತ ಅಭಿವೃದ್ಧಿ ನಿಗಮಕ್ಕಾಗಿ ಇಷ್ಟೊಂದು ಮೊತ್ತದ ಅನುದಾನವನ್ನು ದೇಶದ ಬೇರೆ ಯಾವ ರಾಜ್ಯದಲ್ಲಿಯೂ ನೀಡುವಂತಹ ಪ್ರಯತ್ನವಾಗಿಲ್ಲ. ಕ್ರೈಸ್ತ ಸಮುದಾಯದ ಬಗ್ಗೆ ಮುಖ್ಯಮಂತ್ರಿ ಹೊಂದಿರುವ ಗೌರವವನ್ನು ಈ ನಿರ್ಧಾರ ಪ್ರದರ್ಶಿಸುತ್ತದೆ ಎಂದು ಐವಾನ್ ಡಿ’ಸೊಜಾ ಹೇಳಿದರು.

ನಮ್ಮ ರಾಜ್ಯದಲ್ಲಿ ಕ್ರೈಸ್ತರು ಶೇ.4ರಷ್ಟು ಇದ್ದಾರೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯಾದ ಬಳಿಕ ಎಲ್ಲ ಜಿಲ್ಲೆಗಳಲ್ಲಿ ವ್ಯವಸ್ಥಾಪನಾ ಕಚೇರಿಗಳನ್ನು ಆರಂಭಿಸಿ, ಸಮುದಾಯದವರಿಗೆ ಸೌಲಭ್ಯ ಕಲ್ಪಿಸಬೇಕಿದೆ ಎಂದು ಅವರು ತಿಳಿಸಿದರು.

ಸಮುದಾಯ ಭವನಗಳ ನಿರ್ಮಾಣ, ಶ್ಮಶಾನ ಅಭಿವೃದ್ಧಿ, ಉದ್ಯಮಗಳ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ದಲಿತ ಕ್ರೈಸ್ತರಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನೀಡುವಂತೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕ್ರೈಸ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಐವಾನ್ ಡಿಸೋಜಾ ಆಗ್ರಹಿಸಿದರು.

ಬಜೆಟ್‌ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆಗೆ ಬೆಂಬಲ ನೀಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಐವಾನ್ ಡಿಸೋಜಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News