ಯೋಧರು, ಕೇಂದ್ರ ಸರಕಾರದ ಜೊತೆ ನಿಲ್ಲುತ್ತೇವೆ: ದಿನೇಶ್ ಗುಂಡೂರಾವ್

Update: 2019-02-15 14:57 GMT

ಬೆಂಗಳೂರು, ಫೆ.15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ರಾಜ್ಯದ ಕಾಂಗ್ರೆಸ್ ನಾಯಕರು ಭಾವಪೂರ್ಣ ನಮನ ಸಲ್ಲಿಸಿದರು.

ಶುಕ್ರವಾರ ನಗರದ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ 47 ಮೇಣದ ಬತ್ತಿ ಹಚ್ಚಿ, ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮೂಲಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.

ಬಳಿಕ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಯುದ್ಧದ ಮಾದರಿಯಲ್ಲಿ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಪಕ್ಷ, ಆಡಳಿತ ಯಾರೇ ಮಾಡಲಿ, ಇಂತಹ ವೇಳೆ ಯೋಧರು ಮತ್ತು ಕೇಂದ್ರ ಸರಕಾರದ ಜೊತೆ ನಾವು ನಿಲ್ಲುತ್ತೇವೆ ಎಂದು ನುಡಿದರು.

ಕಳೆದ ನಾಲ್ಕು ವರ್ಷಗಳಿಂದ ಹೆಚ್ಚು ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೃತ್ಯಗಳನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ ಎಂದ ಅವರು, ಇಂತಹ ದುರ್ಘಟನೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರವು ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಮಾತನಾಡಿ, ಕಿರಿಯ ವಯಸ್ಸಿನ ಯುವಕನೋರ್ವ ಭಯೋತ್ಪಾದಕನಾಗಿ, ಭಾರತೀಯ ಯೋಧರ ಬಲಿ ಪಡೆದಿರುವುದು ಶೋಚನೀಯ. ಯಾವ ಧರ್ಮದ ಸಂಸ್ಥಾಪಕರು ಎಲ್ಲಿಯೂ ಭಯೋತ್ಪಾದನೆ ಚಟುವಟಿಕೆಗಳನ್ನು ಪ್ರಚೋದಿಸಿಲ್ಲ. ಇಂತಹ ಕೃತ್ಯಗಳಿಗೆ ಧರ್ಮದ ನಂಟು ಸೇರಿಸುವುದನ್ನು ಬಿಡಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಪ್ಪ ಅಮರನಾಥ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

‘ಸರಕಾರಿ ಉದ್ಯೋಗ ನೀಡಿ’

 ಉಗ್ರರ ದಾಳಿಗೆ ಮಂಡ್ಯದ ಮದ್ದೂರು ತಾಲೂಕು ಗುಡಿಗೆರೆ ಗ್ರಾಮದ ಗರೀಬಿ ಕಾಲನಿ ನಿವಾಸಿಗಳಾದ ಹೊನ್ನಯ್ಯ-ಚಿಕ್ಕತಾಯಮ್ಮ ದಂಪತಿ ಪುತ್ರ ಎಚ್.ಗುರು (33) ಹುತಾತ್ಮನಾಗಿದ್ದು, ಅವರ ಕುಟುಂಬಕ್ಕೆ ಸರಕಾರ ಆಸರೆ ಆಗಬೇಕು. ಜೊತೆಗೆ, ಗುರು ಅವರ ಪತ್ನಿಗೆ ಸರಕಾರಿ ಉದ್ಯೋಗ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು.

-ಬಿ.ಎಲ್.ಶಂಕರ್, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News