ಇನ್ಸ್‌ಪೆಕ್ಟರ್ ಮಲ್ಲೇಶ್ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

Update: 2019-02-15 16:06 GMT

ಬೆಂಗಳೂರು, ಫೆ.15: ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಬಸಪುರ ಗ್ರಾಮದ ಸರ್ವೆ ನಂ.21/2ರಲ್ಲಿರುವ 3990 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಲ್ಲೇಶ್, ಪೇದೆ ನಾರಾಯಣ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಎಂ.ಸೆಲ್ವಂ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಬ್ದುಲ್ ಅಲೀಮ್ ಎಂಬವರು ದೂರು ಸಲ್ಲಿಸಿದ್ದಾರೆ.

2004ರಲ್ಲಿ ಈ ನಿವೇಶನವನ್ನು ಖರೀದಿಸಿದ್ದು, 2018-19ರವರೆಗೆ ಬಿಬಿಎಂಪಿಗೆ ಕಂದಾಯ ಕಟ್ಟಿದ್ದೇನೆ. ಇದೀಗ ಇನ್ಸ್‌ಪೆಕ್ಟರ್ ಮಲ್ಲೇಶ್, ಸೆಲ್ವಂ ಹಾಗೂ ಇನ್ನಿತರರು ನನ್ನಲ್ಲಿ 'ನಿವೇಶನವನ್ನು ಖಾಲಿ ಮಾಡು, ಇಲ್ಲದಿದ್ದರೆ ನಿನ್ನನ್ನು ಹಾಗೂ ಈ ನಿವೇಶನದಲ್ಲಿ ಬಾಡಿಗೆಗೆ ಇರುವ ಶ್ರೀ ಸಾಯಿಬಾಬಾ ಕಾರ್ ಗ್ಯಾರೇಜ್‌ನವರನ್ನು ಹೊರಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಅಬ್ದುಲ್ ಅಲಿಮ್ ಆರೋಪಿಸಿದ್ದಾರೆ.

ಅಲ್ಲದೆ, ಇಂದು ಸುಮಾರು 11 ಲಕ್ಷ ರೂ.ಖರ್ಚು ಮಾಡಿ ನಿರ್ಮಿಸಿದ್ದ ಶೆಡ್ ಅನ್ನು ಪೊಲೀಸರು ಹಾಗೂ ಲ್ಯಾಂಡ್ ಮಾಫಿಯಾ ಸೆಲ್ವಂ ಕಿತ್ತು ಹಾಕಿಸಿದ್ದಾರೆ. ಇವರು ಸ್ಥಳೀಯ ಕೆಲವು ಗೂಂಡಾಗಳನ್ನು ಬಳಸಿಕೊಂಡು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿವಿಲ್ ಕೋರ್ಟ್‌ನಲ್ಲಿ ಈ ನಿವೇಶನ ಕುರಿತು ಇಂಜೆಕ್ಷನ್ ಆರ್ಡರ್ ಇರುವ ಮಾಹಿತಿಯನ್ನು ಅವರ ಗಮನಕ್ಕೆ ತಂದಾಗ, ಇನ್ಸ್‌ಪೆಕ್ಟರ್ ಮಲ್ಲೇಶ್ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಾಗೂ ಸೆಲ್ವಂ ಎಂಬವರಿಂದ ನನಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ, ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬ್ದುಲ್ ಅಲೀಮ್, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News