ಪಿಎಚ್‌ಡಿ ಮುಗಿಸಿದ ಕನ್ಹಯ್ಯ ಕುಮಾರ್ ಮುಂದಿನ ಗುರಿ ಇದು!

Update: 2019-02-16 03:55 GMT

ಹೊಸದಿಲ್ಲಿ, ಫೆ.16: ಜವಾಹರಲಾಲ್ ನೆಹರೂ ವಿವಿಯಿಂದ ಗುರುವಾರ ಪಿಎಚ್‌ಡಿ ಪದವಿ ನಡೆದ ಕನ್ಹಯ್ಯ ಕುಮಾರ್ ಶಿಕ್ಷಣ ಕ್ಷೇತ್ರದಲ್ಲೇ ಮುಂದುವರಿಯಲು ಬಯಸಿದ್ದು, ಸಹಾಯಕ ಪ್ರೊಫೆಸರ್ ಹುದ್ದೆಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

"ರಾಜಕೀಯ ನನಗೆ ವೃತ್ತಿಯಲ್ಲ; ನನ್ನ ಹೊಣೆಗಾರಿಕೆ ಇರುವುದು ಸಮಾಜದ ಬಗ್ಗೆ" ಎಂದು ಈ ಯುವ ನಾಯಕ ಸ್ಪಷ್ಟಪಡಿಸಿದರು.

ತಮ್ಮ ಪಿಎಚ್‌ಡಿ ಪ್ರಬಂಧವನ್ನು 2018ರ ಜುಲೈನಲ್ಲಿ ಸಲ್ಲಿಸಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಇವರ ಮೇಲಿದ್ದು, ಇದಕ್ಕಾಗಿ ದೇಶದ್ರೋಹ ಆರೋಪ ಎದುರಿಸುತ್ತಿದ್ದರೂ, ನಿಗದಿತ ಅವಧಿಯಲ್ಲಿ ತಮ್ಮ ಸಂಶೋಧನೆ ಪೂರ್ಣಗೊಳಿಸಿದ್ದಾರೆ. ಜೆಎನ್‌ಯು ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಆಫ್ರಿಕನ್ ಅಧ್ಯಯನ ಕೇಂದ್ರದಲ್ಲಿ ಏಕೀಕೃತ ಎಂಫಿಲ್/ಪಿಎಚ್‌ಡಿ ಪದವಿಗೆ ಪ್ರವೇಶ ಪಡೆದಿದ್ದರು. ಇದರಲ್ಲಿ ಎರಡು ವರ್ಷ ಎಂಫಿಲ್ ಹಾಗೂ ಐದು ವರ್ಷಗಳ ಪಿಎಚ್‌ಡಿ ಕೋರ್ಸ್ ಸೇರಿದೆ.

"ನಮ್ಮ ಬ್ಯಾಚ್‌ನಲ್ಲಿ ಮೌಖಿಕ ಸಂದರ್ಶನ (ವೈವಾ) ಪೂರ್ಣಗೊಳಿಸಿದ ಮೊದಲ ವ್ಯಕ್ತಿ ನಾನು" ಎಂದು ಕನ್ಹಯ್ಯ ಹೇಳಿದ್ದಾರೆ. "ಪ್ರೊಸೆಸ್ ಆಫ್ ಡಿ ಕೊಲೊನಿಸೈಸೇಷನ್ ಆ್ಯಂಡ್ ಸೋಶಿಯಲ್ ಟ್ರಾನ್ಸ್‌ಫಾರ್ಮೇಶನ್ ಇನ್ ಸೌತ್ ಆಫ್ರಿಕ, 1994-2015" ಎಂಬ ವಿಷಯದ ಬಗ್ಗೆ ಅವರು ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.

ಸಂಸತ್ ಭವನದ ಮೇಲೆ ದಾಳಿ ನಡೆಸಿದ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಜೆಎನ್‌ಯು ತನಿಖಾ ತಂಡವನ್ನು ರಚಿಸಿದ ಹಿನ್ನೆಲೆಯಲ್ಲಿ, ಇವರ ಪ್ರಬಂಧ ಮಂಡನೆಗೆ ತಡೆ ಉಂಟಾಗಿತ್ತು.

2018ರ ಜುಲೈ 4ರಂದು ವಿವಿ ಶಿಸ್ತು ಪಾಲನಾಧಿಕಾರಿ ಆದೇಶ ಹೊರಡಿಸಿ, ಕ್ಯಾಂಪಸ್ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ 10 ಸಾವಿರ ರೂಪಾಯಿ ದಂಡ ವಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News