ರವೀಶ್ ರ ಟೈಮ್ ಮುಗೀತು ಎಂದು ಎನ್‌ಡಿಟಿವಿ ಕಚೇರಿ ಹೊರಗೆ ಬೋರ್ಡ್ ಹಾಕಿಸಿದವರಿಗೆ ಅವರ ತಿರುಗೇಟು ಏನು ಗೊತ್ತೇ ?

Update: 2019-02-17 18:46 GMT

ಹೊಸದಿಲ್ಲಿ, ಫೆ.17: ಪತ್ರಕರ್ತರು ತಮ್ಮ ನಡುವೆ ‘‘ದ್ವೇಷವೆಂಬ ವಿಷವನ್ನು ಹರಡಕೂಡದು’’ ಅಥವಾ ಪ್ರೇಕ್ಷಕರ ಆತಂಕದ ಜ್ವಾಲೆಗೆ ತುಪ್ಪ ಸುರಿಯಕೂಡದು ಎಂದು ಎನ್‌ಡಿಟಿವಿ ಇಂಡಿಯಾದ ರವೀಶ್ ಕುಮಾರ್ ಹೇಳಿದ್ದಾರೆ. 

ಅವರು ಹೊಸದಿಲ್ಲಿಯಲ್ಲಿ ಶನಿವಾರ ಇಎನ್‌ಬಿಎ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೇಷ್ಠ ಹಿಂದಿ ಸುದ್ದಿವಾಹಿನಿಗಾಗಿನ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದು ಮಾತನಾಡುತ್ತಿದ್ದರು.

ಪ್ರತಿಸ್ಪರ್ಧಿ ಸುದ್ದಿವಾಹಿನಿಯೊಂದು ಕಳೆದ ವರ್ಷ ನಗರದಲ್ಲಿ ತನ್ನ ಪ್ರೈಮ್ ಟೈಮ್ ಶೋ ವನ್ನು ಗುರಿಯಿರಿಸಿ, ಭಿತ್ತಿಫಲಕಗಳನ್ನು ಅಳವಡಿಸಿದ್ದನ್ನು ಪ್ರಸ್ತಾವಿಸಿದ ರವೀಶ್ ಕುಮಾರ್ ‘‘ನಾನು ಸುತ್ತಮುತ್ತಲೂ ಇದ್ದೇನೆ ಅಥವಾ ಇಲ್ಲವೇ ಎಂಬ ಬಗ್ಗೆ ಚಿಂತೆ ಬೇಡ. ಪತ್ರಿಕೋದ್ಯಮದಲ್ಲಿ ಶ್ರೀಸಾಮಾನ್ಯನು ಯಾವಾಗಲೂ ರವೀಶ್‌ಗಾಗಿ ಹುಡುಕಾಡುತ್ತಲೇ ಇರುತ್ತಾನೆ’’ ಎಂದರು.

ಕಳೆದ ವರ್ಷ ಪ್ರತಿಸ್ಪರ್ಧಿ ಸುದ್ದಿವಾಹಿನಿಯೊಂದು ರವೀಶ್‌ರ ಪ್ರೈಮ್ ಟೈಮ್ ನೋ ಲಾಂಗರ್ ಪ್ರೈಮ್ (ರವೀಶ್‌ರ ಪ್ರೈಮ್‌ ಟೈಮ್ ಕಾರ್ಯಕ್ರಮ ಈಗ ಪ್ರಧಾನವಾಗಿ ಉಳಿದಿಲ್ಲ) ಎಂಬ ಬ್ಯಾನರ್ ಜಾಹೀರಾತುಗಳನ್ನು ಪ್ರದರ್ಶಿಸಿತ್ತು. ‘‘ದಿ ನ್ಯೂಸ್ ವಿಲ್ ಟಾಕ್, ನಾಟ್ ದಿ ಆ್ಯಂಕರ್’ (ಸುದ್ದಿ ಮಾತನಾಡುತ್ತದೆ. ನಿರೂಪಕನಲ್ಲ) ಎಂಬ ಟ್ಯಾಗ್‌ಲೈನನ್ನು ಕೂಡಾ ಅದು ಪ್ರಕಟಿಸಿತ್ತು. ನಾನೀಗ ಪ್ರಮುಖವಾಗಿ ಉಳಿದಿಲ್ಲವೆಂಬುದನ್ನು ಘೋಷಿಸಲು ತಾವು ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿರುವುದಾಗಿ ಆ ಚಾನೆಲ್‌ನ ಮಾಧ್ಯಮ ಯೋಜನಾ ತಂಡವು ನನಗೆ ಮಾಹಿತಿ ನೀಡಿದಲ್ಲಿ, ನಾನವರಿಗೆ ‘‘ಆ ಹಣವನ್ನು ಬಡ ಪತ್ರಕರ್ತರಿಗೆ ವಿತರಿಸಿ. ನಾನು ಪ್ರೈಮ್‌ ಟೈಮ್‌ಗೆ ರಾಜೀನಾಮೆ ನೀಡಿ, ಮನೆಗೆ ತೆರಳುತ್ತಿದ್ದೆ’’ ಎಂದು ಹೇಳಿದರು.

ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆಯನ್ನು ಪ್ರಸ್ತಾವಿಸುತ್ತಾ ಮಾತನಾಡಿದ ಅವರು, ‘‘ಪತ್ರಕರ್ತರು ಪ್ರಾಮಾಣಿಕವಾದ ಉದ್ದೇಶಗಳನ್ನು ಹೊಂದಿದ್ದರೆ ಅವರು ಅರೆಸೈನಿಕ ಪಡೆಗಳ ಹಕ್ಕುಗಳಿಗಾಗಿ ಹೋರಾಡಿ. ಅವರಿಗೆ ಯೋಗ್ಯವಾದ ಪಿಂಚಣಿ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿ. ಇಂತಹ ವರದಿಗಳನ್ನು ಹಂಚಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆಯೇ ಹೊರತು, ನನ್ನ ಕಾಲ ಮುಗಿಯಿತೆಂದು ಘೋಷಿಸುವ ಭಿತ್ತಿಫಲಕವನ್ನು ನನ್ನ ಕಚೇರಿಯ ಮುಂದೆ ಅಳವಡಿಸುವುದಲ್ಲ’’ ಎಂದವರು ಮಾರ್ಮಿಕವಾಗಿ ನುಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News