ಅಗ್ರಸ್ಥಾನದಲ್ಲಿ ಕೊಹ್ಲಿ, ಮೂರನೇ ಸ್ಥಾನಕ್ಕೆ ಪೂಜಾರ

Update: 2019-02-17 18:42 GMT

ಐಸಿಸಿ ಟೆಸ್ಟ್ ರ್ಯಾಂಕಿಂಗ್

ದುಬೈ, ಫೆ.17: ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ(1) ಹಾಗೂ ಸಹ ಆಟಗಾರ ಚೇತೇಶ್ವರ ಪೂಜಾರ(3) ತಮ್ಮ ಸ್ಥಾನಗಳಲ್ಲೇ ಮುಂದುವರಿ ದಿದ್ದಾರೆ. ಶ್ರೀಲಂಕಾದ ಕುಶಾಲ್ ಪೆರೇರ 58 ಸ್ಥಾನಗಳ ಭಾರೀ ಏರಿಕೆ ಕಂಡು 40ನೇ ರ್ಯಾಂಕಿಂಗ್ ಸಂಪಾದಿಸಿದ್ದಾರೆ.

992 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ದಾಂಡಿಗರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದರೆ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್(897 ಅಂಕ)ಎರಡನೇ ಸ್ಥಾನದಲ್ಲಿದ್ದಾರೆ. ಪೂಜಾರ(881) ಮೂರನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಕೊಹ್ಲಿ, ಪೂಜಾರ ಹೊರತುಪಡಿಸಿ ಅಗ್ರ 10 ದಾಂಡಿಗರ ಪಟ್ಟಿಯಲ್ಲಿ ಭಾರತದ ಯಾವ ಆಟಗಾರನೂ ಇಲ್ಲ.

ಇತ್ತೀಚೆಗೆ ನಡೆದ ದ.ಆಫ್ರಿಕ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್‌ನ 51 ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 153 ರನ್ ಗಳಿಸಿ ಲಂಕಾಗೆ ಗೆಲುವಿನ ಸಿಹಿ ಉಣಬಡಿಸಿದ ಎಡಗೈ ದಾಂಡಿಗ ಕುಶಾಲ್ ಪೆರೇರ ಜೀವನಶ್ರೇಷ್ಠ 40ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ದ.ಆಫ್ರಿಕದ ಕಾಗಿಸೊ ರಬಾಡರನ್ನು ಹಿಂದಿಕ್ಕಿದ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಫೆ.2006ರ ನಂತರ ಆಸ್ಟ್ರೇಲಿಯದ ಬೌಲರ್‌ವೊಬ್ಬ ಈ ಸಾಧನೆ ಮಾಡಿದ ಶ್ರೇಯಕ್ಕೆ ಪಾತ್ರವಾಗಿದ್ದಾರೆ ಕಮಿನ್ಸ್. ಗ್ಲೆನ್ ಮೆಕ್‌ಗ್ರಾ 2006ರಲ್ಲಿ ಬೌಲರ್‌ಗಳ ಪಟ್ಟಿಯ ಅಗ್ರಸ್ಥಾನ ಪಡೆದಿದ್ದರು. ಈ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜ(794 ಅಂಕ) 5ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜ ಮೂರನೇ ಸ್ಥಾನದಲ್ಲಿ ಸ್ಥಾಪಿತಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News