ಇಂದು ಇಂಗ್ಲೆಂಡ್-ಮಂಡಳಿ ಅಧ್ಯಕ್ಷರ ಇಲೆವೆನ್ ಹಣಾಹಣಿ

Update: 2019-02-17 18:50 GMT

ಮುಂಬೈ, ಫೆ.17: ಪ್ರವಾಸಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಸೋಮವಾರ ನಡೆಲಿರುವ ಅಭ್ಯಾಸ ಪಂದ್ಯದಲ್ಲಿ ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಸ್ಮತಿ ಮಂಧಾನಾ ಮುನ್ನಡೆಸಲಿದ್ದು, ಉತ್ತಮ ಲಯದಲ್ಲಿರುವ ಸ್ಮತಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ಮಧ್ಯೆ ಶುಕ್ರವಾರ ಆರಂಭವಾಗಲಿರುವ ಸರಣಿಗೂ ಮುನ್ನ ಕೋಚ್ ಡಬ್ಲೂ. ವಿ.ರಾಮನ್ ಗರಡಿಯಲ್ಲಿ ಪಳಗುತ್ತಿರುವ ಭಾರತ ತಂಡವು ಮಂಧಾನಾರ ಪ್ರದರ್ಶನದ ಮೇಲೆ ಭರವಸೆಯಿಟ್ಟಿದೆ. ಇಲ್ಲಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಝಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಎರಡು ಪಂದ್ಯಗಳಲ್ಲಿ ಮಂಧಾನಾ 100 ಮತ್ತು 90 ರನ್ ಸೇರಿದಂತೆ ಒಟ್ಟು 196 ರನ್ ಗಳಿಸಿದ್ದರು. ಅದೇ ಲಯವನ್ನು ಮುಂದುವರಿಸುವ ವಿಶ್ವಾದಲ್ಲಿದ್ದಾರೆ ಮಂಧಾನಾ. ಅವರ ಆತ್ಮವಿಶ್ವಾಸಕ್ಕೆ ಮುಂಬರುವ ತವರು ಸರಣಿಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯವು ಶಕ್ತಿ ತುಂಬಲಿದೆ.

ಮಂಧಾನಾ ಹೊರತುಪಡಿಸಿ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ವಿಕೆಟ್‌ಕೀಪರ್ ಆರ್.ಕಲ್ಪನಾ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, ಈ ಅಭ್ಯಾಸ ಪಂದ್ಯದಿಂದ ಅವರೂ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.

ಮತ್ತೊಂದೆಡೆ ಇಂಗ್ಲೆಂಡ್ ಮಹಿಳಾ ತಂಡಕ್ಕೆ 50 ಓವರ್‌ಗಳ ಪಂದ್ಯಗಳ ಸರಣಿಗೂ ಮುನ್ನ ಪಿಚ್, ಹವಾಗುಣ ಹಾಗೂ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಈ ಪಂದ್ಯ ಅನುಕೂಲವಾಗಲಿದೆ.

ಪ್ರವಾಸಿ ತಂಡದಲ್ಲಿಯೂ ಉತ್ತಮ ಲಯದಲ್ಲಿರುವ ಆಟಗಾರ್ತಿಯರ ದಂಡು ಇದೆ. ಕಳೆದ ವರ್ಷದ ಟಿ20 ಸರಣಿಯಲ್ಲಿ ಭಾರತೀಯ ಬೌಲರ್‌ಗಳನ್ನು ದಂಡಿಸಿದ ಟ್ಯಾಮಿ ಬಿಮೊಂಟ್, ಹೀದರ್ ನೈಟ್ ಮತ್ತು ಡ್ಯಾನಿ ವೈಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ರೂಪಿಸುವ ಭಾಗವಾಗಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಫೆ.22ರಿಂದ ಆರಂಭವಾಗಲಿದ್ದು, 25ರಂದು ಎರಡನೇ ಹಾಗೂ 28ರಂದು ಮೂರನೇ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News