ಮಾಧ್ಯಮಗಳಲ್ಲಿ ‘ದಲಿತ’ ಪದ ಬಳಕೆ ಪ್ರಶ್ನಿಸಿದ ಮನವಿ ಸ್ವೀಕರಿಸಲು ಸುಪ್ರೀಂ ನಿರಾಕರಣೆ

Update: 2019-02-18 19:01 GMT

ಹೊಸದಿಲ್ಲಿ, ಫೆ. 18: ಸಾರ್ವಜನಿಕ ಚರ್ಚೆಯ ಸಂದರ್ಭ ಮಾದ್ಯಮಗಳು ‘ದಲಿತ’ ಪದ ಬಳಕೆ ನಿಷೇಧಿಸಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೀಡಿದ ಮಾದ್ಯಮ ಸಲಹೆ ಪ್ರಶ್ನಿಸಿ ಗುಂಪೊಂದು ಸಲ್ಲಿಸಿದ ಮನವಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಸಾರ್ವಜನಿಕ ಚರ್ಚೆಯಿಂದ ‘ದಲಿತ’ ಪದವನ್ನು ಸಚಿವಾಲಯ ನಿಷೇಧಿಸುವ ಮೂಲಕ ಈ ಪದ ಅವಮಾನಕರ ಎಂಬ ತಪ್ಪು ಭಾವನೆ ಹುಟ್ಟು ಹಾಕಿದೆ ಎಂದು ಮನವಿದಾರರು ಹೇಳಿದ್ದಾರೆ. ತಮ್ಮ ಅನನ್ಯತೆ ಅಭಿವ್ಯಕ್ತಿಸುವ ಹಾಗೂ ನಿರ್ಧರಿಸುವ ಪರಿಶಿಷ್ಟ ಜಾತಿಯ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎನ್ನುವ ಕಾರಣಕ್ಕೆ ಸಚಿವಾಲಯದ ಆದೇಶವನ್ನು ಆಕ್ಷೇಪಿಸಿ ಕೆಲವು ದಲಿತರು ಮನವಿ ಸಲ್ಲಿಸಿದ್ದರು. ಈ ಕುರಿತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯವನ್ನು ಸಂಪರ್ಕಿಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ಅವಕಾಶ ನೀಡಿದೆ. ಅಲ್ಲದೆ, ನಿಮಗೆ ಅಸಮಾಧಾನವಾಗಿದ್ದರೆ ಸುಪ್ರೀಂ ಕೋರ್ಟ್‌ನ ಮೆಟ್ಟಿರೇರಬಹುದು ಎಂದು ಹೇಳಿದೆ. ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರನ್ನು ಉಲ್ಲೇಖಿಸುವಾಗ ‘ದಲಿತ’ ಪದ ಬಳಸಬೇಡಿ ಎಂದು ಕಳೆದ ವರ್ಷ ಆಗಸ್ಟ್ 7ರಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಮಾದ್ಯಮಗಳಿಗೆ ಸಲಹೆ ನೀಡಿತ್ತು. ಈ ವಿಷಯದಲ್ಲಿ ಮಾದ್ಯಮಗಳಿಗೆ ನಿರ್ದೇಶನಗಳನ್ನು ನೀಡಲು ಪರಿಶೀಲನೆ ನಡೆಸಿ ಎಂದು ಸಚಿವಾಲಯಕ್ಕೆ ಬಾಂಬೆ ಹೈಕೋರ್ಟ್ ಸೂಚಿಸಿದ ಬಳಿಕ ಸಚಿವಾಲಯ ಈ ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News