ಕಿವೀಸ್ ವಿರುದ್ಧ ಬಾಂಗ್ಲಾ ಧೂಳಿಪಟ

Update: 2019-02-20 18:35 GMT

ಡುನೆಡಿನ್, ಫೆ.20: ವೇಗಿ ಟಿಮ್ ಸೌಥಿ ಅವರ 6 ವಿಕೆಟ್ ಗೊಂಚಲು ಹಾಗೂ ರಾಸ್ ಟೇಲರ್‌ರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಕಿವೀಸ್ ತಂಡ ಬಾಂಗ್ಲಾವನ್ನು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 88 ರನ್‌ಗಳಿಂದ ಮಣಿಸಿದೆ. ಆ ಮೂಲಕ ಸರಣಿಯನ್ನು 3-0 ಯಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

 ಇಲ್ಲಿನ ಯೂನಿವರ್ಸಿಟಿ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ನ್ಯೂಝಿಲೆಂಡ್ ಬ್ಯಾಟಿಂಗ್‌ಗೆ ಇಳಿಯಲ್ಪಟ್ಟಿತು. ಮೂವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಆತಿಥೇಯ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 330 ರನ್‌ಗಳ ಬೃಹತ್ ಮೊತ್ತ ಜಮೆ ಮಾಡಿತು. ರಾಸ್ ಟೇಲರ್(69 ರನ್, 7 ಬೌಂಡರಿ) ಅತ್ಯಧಿಕ ಸ್ಕೋರ್ ಗಳಿಸಿ ಮಿಂಚಿದರೆ ಹೆನ್ರಿ ನಿಕೊಲ್ಸ್(64 ರನ್, 7 ಬೌಂಡರಿ) ಹಾಗೂ ನಾಯಕ ಹಾಗೂ ವಿಕೆಟ್-ಕೀಪರ್ ದಾಂಡಿಗ ಟಾಮ್ ಲಥಮ್(59 ರನ್, 2 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳನ್ನು ಸಿಡಿಸಿ ಟೇಲರ್‌ಗೆ ಉತ್ತಮ ಸಾಥ್ ನೀಡಿದರು.

ಕೊನೆಯ ಹಂತದಲ್ಲಿ ಅಬ್ಬರಿಸಿದ ಜೇಮ್ಸ್ ನೀಶಾಮ್(37 ರನ್, 3 ಬೌಂಡರಿ, 2 ಸಿಕ್ಸರ್) ಹಾಗೂ ಕಾಲಿನ್ ಗ್ರಾಂಡೊಮ್ಮೆ(37 ರನ್, 4 ಬೌಂಡರಿ, 2 ಸಿಕ್ಸರ್) ನ್ಯೂಝಿಲೆಂಡ್ ಮೊತ್ತ 300ರ ಗಡಿ ದಾಟುವಂತೆ ನೋಡಿಕೊಂಡರು. ಬಾಂಗ್ಲಾ ಬೌಲಿಂಗ್‌ನಲ್ಲಿ ಮುಸ್ತಫಿಝುರ್ರಹ್ಮಾನ್ 2 ವಿಕೆಟ್ ಪಡೆದರೂ 93 ರನ್ ವ್ಯಯಿಸಿ ದುಬಾರಿ ಎನಿಸಿದರು. 331 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾಗೆ ಆರಂಭದಲ್ಲೇ ಆಘಾತ ಎದುರಾಯಿತು. ಸ್ಕೋರ್‌ಬೋರ್ಡ್ ಮೇಲೆ 2 ರನ್ ಮೂಡುವಷ್ಟರಲ್ಲಿ ಆ ತಂಡ ಕಳೆದುಕೊಂಡಿದ್ದು ಮೂರು ವಿಕೆಟ್. ಈ ಹಂತದಲ್ಲಿ ಆಸರೆಯಾಗಿದ್ದು ಶಬ್ಬಿರ್ರಹ್ಮಾನ್ ಅವರ ಚೊಚ್ಚಲ ಶತಕ(102 ರನ್, 12 ಬೌಂಡರಿ, 2 ಸಿಕ್ಸರ್) ಹಾಗೂ ಮುಹಮ್ಮದ್ ಸೈಫುದ್ದೀನ್ ಸಮಯೋಚಿತ ಆಟ(44, 4 ಬೌಂಡರಿ). ಆದರೆ ಇವರಿಬ್ಬರ ಕೊಡುಗೆ ಬಾಂಗ್ಲಾ ಗೌರವಾರ್ಹ ಮೊತ್ತ ಗಳಿಸಲು ಮಾತ್ರ ಉಪಯೋಗವಾಯಿತು. ಅಂತಿಮವಾಗಿ ಪ್ರವಾಸಿ ತಂಡ 242 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

ಕಿವೀಸ್ ಪರ ಬೌಲಿಂಗ್‌ನಲ್ಲಿ ಬಿರುಗಾಳಿಯಾಗಿ ಕಂಡುಬಂದ ಟಿಮ್ ಸೌಥಿ(65ಕ್ಕೆ 6) ಬಾಂಗ್ಲಾ ವಿಕೆಟ್‌ಗಳನ್ನು ತರಗೆಲೆಯಂತೆ ಉದುರಿಸಿದರು. ಬೌಲ್ಟ್(37ಕ್ಕೆ 2) ಉತ್ತಮ ಬೆಂಬಲ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News