ಕೃಷಿ ಕೋಟಾ ಬಂಡವಾಳಶಾಹಿಗಳ ಪಾಲು

Update: 2019-02-20 18:37 GMT

ಕರ್ನಾಟಕ ರಾಜ್ಯದಲ್ಲಿ ಕೃಷಿ ಪದವಿಯ ಶಿಕ್ಷಣದ ಪ್ರವೇಶಕ್ಕೆ ವಿವಿಧ ರೀತಿಯಲ್ಲಿ ಅವಕಾಶವಿದೆ. ಮೊದಲನೆಯದು ಸಿಇಟಿಯಲ್ಲಿ ಗಳಿಸಿದ ಸಾಮಾನ್ಯ ರ್ಯಾಂಕ್ ಮೂಲಕ, ಎರಡನೆಯದು ಸಿಇಟಿಯ ಕೃಷಿ ಕೋಟಾ ಅಂದರೆ ಪ್ರಾಯೋಗಿಕ ಪರೀಕ್ಷೆಯ ಮೂಲಕ. ಮೂರನೆಯದು ಎನ್‌ಆರ್‌ಐ ಕೋಟಾ ಮತ್ತು ನಾಲ್ಕನೆಯದು ಲ್ಯಾಟರಲ್ ಎಂಟ್ರಿ ಕೋಟಾ.

ಕೃಷಿ ಕೋಟಾ ಎಂಬುದು ಕರ್ನಾಟಕ ಸರಕಾರವು ಸೌಲಭ್ಯ ವಂಚಿತ ಕೃಷಿಯೆ ಪ್ರಾಥಮಿಕ ಆದಾಯವಾಗಿರುವ ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ವಿಜ್ಞಾನದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಲು, ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಪ್ರೋತ್ಸಾಹಿಸಲು ನೀಡಿರುವ ಮೀಸಲಾತಿ ಕಾನೂನು. ಈ ನಿಟ್ಟಿನಲ್ಲಿ ಸರಕಾರವು ಶೇ. 40ರಷ್ಟು ಸೀಟುಗಳನ್ನು ಕೃಷಿ ಕೋಟಾ ಎಂದು ಮೀಸಲಿರಿಸಿ 2003 ಮತ್ತು 2013ರಲ್ಲಿ ಆದೇಶ ಹೊರಡಿಸಿದೆ. (1.ಸರಕಾರದ ಆದೇಶ ಸಂಖ್ಯೆ: ಎಹೆಚ್‌ಡಿ 63 ಎಯುಎಂ 2003, ದಿನಾಂಕ: 10- 07-2003, 2.ಕೃಷಿ ವಿಶ್ವವಿದ್ಯಾನಿಲಯಗಳ ಅಧಿನಿಯಮ, 2009ರ ಪ್ರಕರಣ (ಕಲಂ)-6(2)(1))

ಪ್ರಾಯೋಗಿಕ ಪರೀಕ್ಷೆ ನಡೆಸುವುದು ಕೇವಲ ಕೃಷಿ ಕೋಟಾಗೆ ಮಾತ್ರ, ಏಕೆಂದರೆ ಸರಕಾರದ ಆದೇಶದ ಆಶಯವು ಗ್ರಾಮಾಂತರ ಕೃಷಿ ವಿದ್ಯಾರ್ಥಿಗಳ ಸಾಮಾನ್ಯ ದೈನಂದಿನ ಕೃಷಿ ಪ್ರಾಯೋಗಿಕ ಜ್ಞಾನವನ್ನು ಪರೀಕ್ಷಿಸಿ, ವಿಶೇಷ ಅವಕಾಶವನ್ನು ಕಲ್ಪಿಸುವಂತಹ ನೀತಿ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವಿದ್ಯಾರ್ಥಿಗಳು ಯಾವುದೇ ಟ್ಯುಟೋರಿಯಲ್ ಅಥವಾ ವಿಶೇಷ ತರಬೇತಿಗಳನ್ನು ತೆಗೆದುಕೊಳ್ಳುವಂತಿಲ್ಲ ಮತ್ತು ಕೇಂದ್ರಗಳು ನಡೆಸುವಂತೆಯೂ ಇಲ್ಲ. ರಾಜ್ಯದಲ್ಲಿ ಇತೀಚಿನ ವರ್ಷಗಳಲ್ಲಿ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಪೂರಕ ವಾಗಿ ಮತ್ತು ಸರಕಾರದ ನೀತಿಗೆ ವಿರುದ್ಧವಾಗಿ, ಖಾಸಗಿಯವರು ಹಣಕ್ಕಾಗಿ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ತರಬೇತಿ ಕೇಂದ್ರಗಳನ್ನು ತೆರೆದು ತರಗತಿಗಳನ್ನು ನಡೆಸುತ್ತಿದ್ದಾರೆ, ಇನ್ನೊಂದು ಬಂಡವಾಳಶಾಹಿ ವರ್ಗವು ಹಣದ ಮತ್ತು ರಾಜಕೀಯದ ಬಲದಿಂದ ನಕಲಿ ಕೃಷಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕೃಷಿ ಕೋಟಾದ ಅಡಿಯಲ್ಲಿ ಕೃಷಿ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಪ್ರಾಯೋಗಿಕ ಪರೀಕ್ಷೆಗೆ ತರಬೇತಿ ತರಗತಿಗಳನ್ನು ನಡೆಸುತ್ತಿರುವ ಖಾಸಗಿ ಸಂಸ್ಥೆಗಳು ಅನೇಕ ಪ್ರಾಯೋಗಿಕ ಪರೀಕ್ಷಾ ಸಾಮಗ್ರಿಗಳಾದಂತಹ ಪುಸ್ತಗಳು, ಸಿಡಿಗಳನ್ನು ಬಿಡುಗಡೆಗೊಳಿಸುವುದಲ್ಲದೆ, ಆ್ಯಪ್‌ಗಳನ್ನು ಸಹ ತಯಾರಿಸಿ ಬಿಟ್ಟಿವೆ. ಇವೆಲ್ಲದೆರ ಪರಿಣಾಮ ನಕಲಿ ಮತ್ತು ಕೃಷಿಯ ಗಂಧವನ್ನು ಅರಿಯದ ಶ್ರೀಮಂತರ ಮಕ್ಕಳು ಕೃಷಿ ಕೋಟಾ ಆಶಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ನಿಜವಾದ ರೈತ, ಕೃಷಿ ಕಾರ್ಮಿಕರ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ.

ಗ್ರಾಮಾಂತರ ಜೀವನದಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳು ದೈನಂದಿನ ಜೀವನದಲ್ಲಿ ಕೃಷಿಯಲ್ಲಿ ತೊಡಗಿ, ನಾನಾ ಕಷ್ಟಗಳನ್ನು ಪಟ್ಟು, ಆರ್ಥಿಕ ತೊಂದರೆಗಳಿಂದ ಸ್ಥಳೀಯ ಹಿಂದುಳಿದ ಶಿಕ್ಷಣ ಸಂಸ್ಥೆಗಳಲ್ಲಿ, ಮೂಲಭೂತ ಸೌಕರ್ಯಗಳಿಲ್ಲದ ಪರಿಸ್ಥಿತಿಯಲ್ಲಿ ಕಡಿಮೆ ಅಂಕಗಳೊಂದಿಗೆ ಪದವಿ ಶಿಕ್ಷಣವನ್ನು ಪಡೆಯುವುದು ಸಾಮಾನ್ಯ ಮತ್ತು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯ.
ಸರಕಾರದ ಆದೇಶದನ್ವಯ ಕೃಷಿಯೇ ಪ್ರಾಥಮಿಕ ಆದಾಯವಾಗಿರುವ ಕುಟುಂಬಗಳ ಮತ್ತು ಕಾರ್ಮಿಕರ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕೃಷಿ ಶಿಕ್ಷಣ ದೊರೆತರೆ ಮರಳಿ ತಮ್ಮ ಗ್ರಾಮಗಳಲ್ಲಿ ಕೃಷಿಗೆ ಉತ್ತೇಜನ ನೀಡುವರು ಎಂಬ ಆಶಯ. ಇದರಿಂದ ಪಟ್ಟಣಗಳಿಗೆ ಹೋಗುವ ಯುವಕರ ಸಂಖ್ಯೆಯನ್ನು ಸಹ ಕಡಿಮೆಗೊಳಿಸಬಹುದು, ನಗರೀಕರಣವನ್ನು ತಡೆಯಬಹುದು. ನಿರುದ್ಯೋಗವನ್ನು ಮಟ್ಟ ಹಾಕಿ ವೈಜ್ಞಾನಿಕ ಕೃಷಿಯನ್ನು ಪ್ರೋತ್ಸಾಹಿಸಬಹುದು. ಆ ಮೂಲಕ ಸ್ವಾವಲಂಬನೆಯನ್ನು ಕಾಪಾಡಬಹುದು.

ಇಂದಿನ ದುರಂತವೆಂದರೆ, ಕೃಷಿ ಭೂಮಿ ಇಲ್ಲದ ಕೃಷಿಯೇತರ ಮೂಲಗಳೇ ತಮ್ಮ ಪ್ರಾಥಮಿಕ ಆದಾಯವಾಗಿರುವ ಎಷ್ಟೊ ಸರಕಾರಿ ನೌಕರರ, ಉದ್ಯಮಿಗಳ ಮಕ್ಕಳು, ಪಿತ್ರಾರ್ಜಿತ ಭೂಮಿಯನ್ನು ಹೊಂದಿರುವ ಜನರ ಮಕ್ಕಳು, ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ವಿದ್ಯಾರ್ಥಿಗಳು ಮತ್ತು ಎಂದೂ ಗ್ರಾಮಾಂತರ ಕೃಷಿ ಜೀವನವನ್ನೇ ಕಂಡಿರದ ವಿದ್ಯಾರ್ಥಿಗಳು ಹೆಸರುವಾಸಿ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಗಟ್ಟಲೆ ಹಣ ಚೆಲ್ಲಿ ವಿದ್ಯಾಭ್ಯಾಸ ಪಡೆದು ಪಿಯುಸಿಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದು ಖಾಸಗಿ ಕೃಷಿ ಪ್ರಾಯೋಗಿಕ ಪರೀಕ್ಷೆಯ ಕೇಂದ್ರಗಳಲ್ಲಿ ತರಬೇತಿಯನ್ನು ಪಡೆದು, ಸರಕಾರ ನಡೆಸುವ ಪ್ರಾಯೋಗಿಕ ಪರೀಕ್ಷೆಯ ಕೃಷಿ ಕೋಟಾ ಮತ್ತು ಸಾಮಾನ್ಯ ಕೋಟಾ ಎರಡೂ ಕಡೆ ಪ್ರವೇಶ ಪಡೆಯುತ್ತಿರುವುದು ಕೃಷಿ ಕೋಟಾ ಪಡೆಯಬೇಕಿದ್ದ ನಿಜವಾದ ರೈತರ ಮಕ್ಕಳಿಗೆ ಮಾಡಿದ ದ್ರೋಹವೇ ಆಗಿದೆ. ಕಾನೂನಿನ ಅಡಿಪಾಯವಿಲ್ಲದ, ಕಾನೂನಿಗೆ ವಿರುದ್ಧವಾಗಿ ನಡೆಯುವ ಖಾಸಗಿ ಅವ್ಯವಹಾರಗಳ ಅಡಿಯಲ್ಲಿ ಕೃಷಿ ಕೋಟಾ ಎಂಬುದು ಇಂದು ಬರೀ ಸುಳ್ಳಾಗಿದೆ. ಕೃಷಿ ಕೋಟಾ ಆಶಯವು ಮಣ್ಣಾಗಿದೆ. ಈಗ ನಿಜವಾದ ರೈತರ ಮಕ್ಕಳು ಮತ್ತು ಕೃಷಿ ಕಾರ್ಮಿಕರ ಮಕ್ಕಳು ಎಲ್ಲಿ ಹೋಗಬೇಕು? ಕೃಷಿ ಕೋಟಾ ಏಕೆ ಇರಬೇಕು? ಇದು ಈ ನಾಡಿನ ದೊಡ್ಡ ದುರಂತ. ಇದು ಹೀಗೇ ಮುಂದು ವರಿದರೆ ಭವಿಷ್ಯದಲ್ಲಿ ಕೃಷಿ ಕೋಟಾದ ಆಶಯವೇ ಸರ್ವನಾಶವಾಗುತ್ತದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಮನವಿಯನ್ನು ಸ್ವೀಕರಿಸಿದ ಮಾನ್ಯ ಕೃಷಿ ಮಂತ್ರಿಗಳು 2018 ರ ವಿಶ್ವವಿದ್ಯಾನಿಲಯಗಳ ಸಮನ್ವಯ ಸಮಿತಿಯ ಸಭೆಯಲ್ಲಿ ಇನ್ನು ಮುಂದೆ ಪ್ರಾಯೋಗಿಕ ಪರೀಕ್ಷೆ ಬೇಡ ಮತ್ತು ಕೇವಲ ಗ್ರಾಮೀಣ ಅಭ್ಯರ್ಥಿ, ಕೃಷಿ ಪತ್ರದ ಆಧಾರದ ಮೇಲೆ ಕೃಷಿ ಕೋಟಾ ಸೀಟು ಹಂಚಿಕೆ ಮಾಡಲು ನಿರ್ಧರಿಸಿ ನಡಾವಳಿಗಳನ್ನು ರೂಪಿಸಿದ್ದು ಸ್ವಾಗತಾರ್ಹ. ಆದರೆ ವಿಪರ್ಯಾಸವೆಂಬಂತೆ 2019ರಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಪ್ರಾಯೋಗಿಕ ಪರೀಕ್ಷೆಯ ಮಾರ್ಗವನ್ನೇ ಅನುಸರಿಸಲು ಸೂಚಿಸಲಾಗಿದೆ. ಮತ್ತೆ ಪರೀಕ್ಷೆಯ ತರಬೇತಿ ಕೇಂದ್ರಗಳು ತಲೆ ಎತ್ತಿ ನಿಂತಿವೆ, ಅದೇ ನಕಲಿ ಕೃಷಿ ಪ್ರಮಾಣ ಪತ್ರಗಳು ಬರಲಿವೆ. ರೈತಾಪಿ ವರ್ಗದ ಮಕ್ಕಳು ಅವಕಾಶ ವಂಚಿತರಾಗಲಿದ್ದಾರೆ.

ಆದುದರಿಂದ ನಿಜವಾದ ಕೃಷಿ ಕಾರ್ಮಿಕರ ಮತ್ತು ರೈತರ ಮಕ್ಕಳು ಮಾತ್ರ ಕೇವಲ ತಮ್ಮ ಜೀವನದ ಗ್ರಾಮಾಂತರ ದೈನಂದಿನ ಕೃಷಿ ಜ್ಞಾನದ ಅನುಭವದಿಂದಲೇ, ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯುವ ನಿಯಮವನ್ನು ಪಾಲಿಸಲು, ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಖಾಸಗಿ ಅಥವಾ ಸರಕಾರಿ ವ್ಯಕ್ತಿಗಳು ಕೃಷಿ ಪ್ರಾಯೋಗಿಕ ಪರೀಕ್ಷೆಯ ಸಂಬಂಧಿತ ತರಗತಿಗಳನ್ನು ನಡೆಸಬಾರದೆಂದು ಮತ್ತು ಯಾವುದೇ ಸುಳ್ಳು ಕೃಷಿ ಪ್ರಮಾಣ ಪತ್ರಗಳನ್ನು ಪಡೆಯದ ಹಾಗೆ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳು ಕಠಿಣವಾದ ಕ್ರಮ ತೆಗೆದುಕೊಳ್ಳಬೇಕಿದೆ.

ಸಂಪತ್ತಿನ ತಾರತಮ್ಯದಿಂದ ಸಮಾಜದಲ್ಲಿ ಶ್ರೀಮಂತ ಮತ್ತು ಬಡವ ಎಂದು ಎರಡು ವರ್ಗ ಸೃಷ್ಟಿಯಾಗಬಾರದೆಂಬುದು ಕಾರ್ಲ್‌ಮಾರ್ಕ್ಸ್, ಏಂಗಲ್ಸ್, ಲೋಹಿಯಾ, ಅಂಬೇಡ್ಕರ್ ಮತ್ತು ಲೆನಿನ್ ಮುಂತಾದ ಸಮಾಜವಾದಿಗಳ ಆಶಯ. ಇದು ಶಿಕ್ಷಣದ ತಾರತಮ್ಯದಿಂದಲೂ ನಡೆಯುತ್ತಿರುವ ದುರಂತ.
ಸಮ ಸಮಾಜದ ಕನಸನ್ನು ನನಸು ಮಾಡಲು ರೈತಾಪಿ, ನಿಮ್ನ ವರ್ಗಗಳಿಗೆ ಮತ್ತು ಶ್ರಮಿಕ ವರ್ಗಕ್ಕೆ ಸಾಮಾಜಿಕ ವಿಶೇಷ ನ್ಯಾಯ ಕಲ್ಪಿಸಲು ಈ ಕೃಷಿ ಕೋಟಾ ಎಂಬ ಅವಕಾಶ. ಹೊಟ್ಟೆ ತುಂಬಿದವರೇ ಎಲ್ಲವನ್ನೂ ದೋಚಿದರೆ? ಬೆವರ ಹನಿ ಸುರಿಸಿ ಲೋಕಕ್ಕೆ ಅನ್ನವ ನೀಡುವ ರೈತ ಮತ್ತು ಕೃಷಿ ಕಾರ್ಮಿಕ ವರ್ಗಕ್ಕೇಕೆ ವಂಚಿತ ಉಪವಾಸ? ನಿಜವಾಗಿಯೂ ಸರಕಾರಗಳು ರೈತ ಪರವೇ? ನ್ಯಾಯ ದೊರೆಯಲಿ ರೈತ ಉಳಿಯಲಿ.

Writer - ರಮೇಶ ವಿ., ಬೆಂಗಳೂರು

contributor

Editor - ರಮೇಶ ವಿ., ಬೆಂಗಳೂರು

contributor

Similar News