ಇಂದಿನಿಂದ ಮಹಿಳಾ ಟಿ20 ವಿಶ್ವಕಪ್ ಟಿಕೆಟ್ ಮಾರಾಟ

Update: 2019-02-20 18:40 GMT

ದುಬೈ, ಫೆ.20: ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಟಿಕೆಟ್‌ಗಳು ಗುರುವಾರದಿಂದ ಸಾರ್ವಜನಿಕರ ಖರೀದಿಗೆ ಲಭ್ಯವಿರಲಿವೆ. ಕಾಕತಾಳೀ ಯವೆಂದರೆ ಸರಿಯಾಗಿ ಒಂದು ವರ್ಷದ ನಂತರ ಈ ಟೂರ್ನಿ ಆರಂಭವಾಗಲಿದೆ.

 ಅಂತಿಮ ಪಂದ್ಯ ಸೇರಿದಂತೆ ಟೂರ್ನಿಯ ಎಲ್ಲ ಪಂದ್ಯಗಳ ಟಿಕೆಟ್‌ಗಳನ್ನು ಅಭಿಮಾನಿಗಳು ಅಧಿಕೃತ ವೆಬ್‌ಸೈಟ್ ‘ಟಿ20ವರ್ಲ್ಡ್ಡ್‌ಕಪ್ ಡಾಟ್‌ಕಾಮ್’ ಮೂಲಕ ಖರೀದಿಸಬಹುದು ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 7ನೇ ಆವೃತ್ತಿಯ ಟೂರ್ನಿಯು 2020ರ ಫೆ.21ರಿಂದ ಮಾರ್ಚ್ 8ರವರೆಗೆ ಆಸ್ಟ್ರೇಲಿಯದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ.ಸಿಡ್ನಿಯ ಶೋಗ್ರೌಂಡ್ ಕ್ರೀಡಾಂಗಣದಲ್ಲಿ ಆತಿಥೇಯ, ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಹಾಗೂ ಭಾರತ ತಂಡಗಳ ಮಧ್ಯೆ ಹೊನಲು ಬೆಳಕಿನಲ್ಲಿ ಮೊದಲ ಪಂದ್ಯಕ್ಕೆ ಚಾಲನೆ ದೊರೆಯಲಿದೆ.

ಮಾ.5ರಂದು ಟೂರ್ನಿಯ ಎರಡೂ ಸೆಮಿಫೈನಲ್ ಪಂದ್ಯಗಳು ಐತಿಹಾಸಿಕ ಸಿಡ್ನಿ ಕ್ರಿಕೆಟ್ ಮೈದಾನ(ಎಸ್‌ಸಿಜಿ)ದಲ್ಲಿ ನಡೆಯಲಿವೆ. ಅಂತಿಮ ಪಂದ್ಯವು ಅಂತರ್‌ರಾಷ್ಟ್ರೀಯ ಮಹಿಳಾ ದಿನವಾದ ಮಾ.8ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಮ್‌ಸಿಜಿ)ದಲ್ಲಿ ನಡೆಯಲಿದ್ದು, ದಾಖಲೆಯ ಅಭಿಮಾನಿಗಳ ಹಾಜರಿಯನ್ನು ನಿರೀಕ್ಷಿಸಲಾಗಿದೆ. ವಿಶ್ವದಾದ್ಯಂತ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಫೆ.16-20ರವೆರೆಗೆ ಅಭ್ಯಾಸ ಪಂದ್ಯಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News