ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಹರ್ಮನ್‌ಪ್ರೀತ್ ಕೌರ್ ಅಲಭ್ಯ

Update: 2019-02-20 18:47 GMT

ಮುಂಬೈ, ಫೆ.20: ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಭಾರತದ ತಾರಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಇಂಗ್ಲೆಂಡ್ ವಿರುದ್ಧ ಮುಂಬೈಯಲ್ಲಿ ನಡೆಯುವ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಇದರಿಂದ ಭಾರತಕ್ಕೆ ಭಾರೀ ಹಿನ್ನಡೆಯಾಗಿದೆ. 29 ವರ್ಷ ವಯಸ್ಸಿನ ಕೌರ್, ಭಾರತದ ಪರ 93 ಏಕದಿನ ಪಂದ್ಯಗಳನ್ನು ಆಡಿದ್ದು 34.52ರ ಸರಾಸರಿಯಲ್ಲಿ 2,224 ರನ್ ಕಲೆ ಹಾಕಿದ್ದಾರೆ. ಎರಡು ದಿನಗಳ ಹಿಂದೆ ಅವರು ಪಟಿಯಾಲದಲ್ಲಿದ್ದ ಸಮಯದಲ್ಲಿ ಮೇಲಿಂದ ಮೇಲೆ ಹಿಮ್ಮಡಿ ನೋವಿನ ಸಮಸ್ಯೆಗೆ ಒಳಗಾಗಿದ್ದರು. ಆದಾಗ್ಯೂ ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೀಲ್ಡಿಂಗ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಏಕದಿನ ಸರಣಿಯ ನಂತರ ನಡೆಯುವ ಟಿ20 ಸರಣಿಗೂ ಹರ್ಮನ್‌ಪ್ರೀತ್ ಲಭ್ಯರಾಗುವ ಸಂಭವ ಇಲ್ಲದಿರುವ ಕಾರಣ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಇಲೆವೆನ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದ ಸ್ಮತಿ ಮಂಧಾನಾಗೆ ಮೊದಲ ಬಾರಿಗೆ ನಾಯಕಿಯಾಗುವ ಅವಕಾಶ ಸಾಧ್ಯತೆ ಮುಕ್ತವಾಗಿದೆ. ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News