ಸದ್ಯ ಯಾವುದೇ ನಿರ್ಧಾರವಿಲ್ಲ: ವಿನೋದ್ ರಾಯ್

Update: 2019-02-22 18:52 GMT

ಹೊಸದಿಲ್ಲಿ, ಫೆ.22: ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸದ್ಯ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಇರಲು ಭಾರತೀಯ ಕ್ರಿಕೆಟನ್ನು ನಿಭಾಯಿಸುವ ಆಡಳಿತಗಾರರ ಸಮಿತಿ (ಸಿಒಎ) ನಿರ್ಧರಿಸಿದೆ. ಆದರೆ ಉಗ್ರರಿಗೆ ಸಹಾಯವನ್ನು ನೀಡುವ ರಾಷ್ಟ್ರಗಳ ಜೊತೆ ಸಂಬಂಧವನ್ನು ಕಡಿದುಕೊಳ್ಳುವಂತೆ ಐಸಿಸಿ ಸದಸ್ಯರಿಗೆ ವೈಯಕ್ತಿಕವಾಗಿ ಮನವಿ ಮಾಡಲಾಗುವುದು ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ. 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದುಕೊಂಡ ಪುಲ್ವಾಮ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಜೂನ್ 16ರಂದು ಓಲ್ಡ್ ಟ್ರಫೊರ್ಡ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಭಾರತ-ಪಾಕ್ ವಿಶ್ವಕಪ್ ಪಂದ್ಯದ ಬಗ್ಗೆ ಸರಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಇದೇ ವೇಳೆ ಐಸಿಸಿ ಜೊತೆ ನಾವು ಎರಡು ವಿಷಯಗಳನ್ನು ಪ್ರಸ್ತಾಪಿಸಲಿದ್ದೇವೆ, ವಿಶ್ವಕಪ್ ವೇಳೆ ಆಟಗಾರರಿಗೆ ಹೆಚ್ಚಿನ ಭದ್ರತೆ ಮತ್ತು ಉಗ್ರರಿಗೆ ನೆರವು ನೀಡುವ ದೇಶಗಳ ಜೊತೆ ಕ್ರಿಕೆಟ್ ಆಡುವ ದೇಶಗಳು ಸಂಬಂಧವನ್ನು ಕಡಿದುಕೊಳ್ಳುವುದು ಎಂದು ವಿನೋದ್ ರಾಯ್ ತಿಳಿಸಿದ್ದಾರೆ. ಮೇ 30ರಿಂದ ನಡೆಯಲಿರುವ ವಿಶ್ವಕಪ್‌ನಿಂದ ಪಾಕಿಸ್ತಾನವನ್ನು ಹೊರಗಿಡುವಂತೆ ಸಿಒಎ ಮತ್ತು ಬಿಸಿಸಿಐ ಐಸಿಸಿಗೆ ಮನವಿ ಮಾಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಭಾರತ ಆಡಬಾರದು ಎಂದು ಮಾಜಿ ಭಾರತೀಯ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಮುಹಮ್ಮದ್ ಅಝರುದ್ದೀನ್ ಅಭಿಪ್ರಾಯಿಸಿದ್ದರೆ, ಕ್ರಿಕೆಟ್ ಆಡದೆ ಪಾಕಿಸ್ತಾನಕ್ಕೆ ಅಂಕ ಬಿಟ್ಟುಕೊಡಬಾರದು. ಬದಲಾಗಿ ಪಾಕ್ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಬೆಳೆಸಬಾರದು ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News