ಎರಡನೇ ಏಕದಿನದಲ್ಲಿ ವಿಂಡೀಸ್ ಗೆ 26 ರನ್ ಜಯ

Update: 2019-02-23 19:11 GMT

ಬಾರ್ಬಡೋಸ್, ಫೆ.23: ಯುವ ಆಟಗಾರ ಶಿಮ್ರನ್ ಹೆಟ್ಮೆಯರ್ ಅವರ ಅಮೋಘ ಶತಕ ಹಾಗೂ ಶೆಲ್ಡನ್ ಕಾಟ್ರೆಲ್‌ರ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ಮೊದಲ ಪಂದ್ಯದ ಸೋಲಿನ ಸೇಡನ್ನು ತೋರಿಸಿಕೊಂಡ ವೆಸ್ಟ್ ಇಂಡೀಸ್, ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 26 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧ ಸತತ ಹತ್ತು ಏಕದಿನ ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚಿದ ವೆಸ್ಟ್ ಇಂಡೀಸ್, ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಹೆಟ್ಮೆಯರ್ ಶತಕದ (104, 83 ಎಸೆತ) ಬಲದಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 289 ರನ್ ಗಳಿಸಿತು.

ಸ್ಫೋಟಕ ಹೊಡೆತಗಳ ಆಟಗಾರ ಕ್ರಿಸ್ ಗೇಲ್(50, 63 ಎಸೆತ) ಮತ್ತೊಮ್ಮೆ ಮಿಂಚಿದರು. ಹೆಟ್ಮೆಯರ್ ಅವರಿಂದ ಏಕದಿನ ಕ್ರಿಕೆಟ್‌ನಲ್ಲಿ 4ನೇ ಶತಕ ಇದಾಗಿದೆ. ಇದು ತಾನೊಬ್ಬ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಬಲ್ಲ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದೆ.

290 ರನ್‌ಗಳ ಗೆಲುವಿನ ಗುರಿ ಬೆಂಬತ್ತಿದ ಪ್ರವಾಸಿ ತಂಡಕ್ಕೆ ಇಯಾನ್ ಮಾರ್ಗನ್(70) ಬಲ ತುಂಬಿದರು. ಒಂದು ಹಂತದಲ್ಲಿ 6 ವಿಕೆಟ್‌ಗಳು ಕೈಯಲ್ಲಿರುವಂತೆ 61 ಎಸೆತಗಳಿಂದ 62 ರನ್ ಗಳಿಸಬೇಕಾದ ಸುಲಭ ಸವಾಲಿದ್ದ ಇಂಗ್ಲೆಂಡ್‌ಗೆ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಭಾರೀ ಆಘಾತ ನೀಡಿದರು. ಬೆನ್ ಸ್ಟೋಕ್ಸ್(79), ಜೋಸ್ ಬಟ್ಲರ್(34) ಹಾಗೂ ಟಾಮ್ ಕರ್ರನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು.

ಇದೇ ವೇಳೆ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ವಿಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್(46ಕ್ಕೆ 5) ಇಂಗ್ಲೆಂಡ್‌ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಂತಿಮವಾಗಿ ಇಂಗ್ಲೆಂಡ್ 263 ರನ್‌ಗೆ ಸರ್ವಪತನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News