ಏರೋ ಶೋನಲ್ಲಿ ಅಗ್ನಿ ಅವಘಡ ಪ್ರಕರಣ: ಬೆಂಕಿ ಮೂಲಕ್ಕೆ ತೀವ್ರ ಹುಟುಕಾಟ..!
ಬೆಂಗಳೂರು, ಫೆ.24: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನದ ವೇಳೆ ನೂರಾರು ಕಾರುಗಳು ಸುಟ್ಟು ಕರಕಲಾದ ಪ್ರಕರಣ ಸಂಬಂಧ ಬೆಂಕಿಯ ಕಾರಣಗಳಿಗಾಗಿ ತೀವ್ರ ತನಿಖೆ ನಡೆಸಲಾಗುತ್ತಿದೆ.
ರವಿವಾರ ಯಲಹಂಕ ವಾಯುನೆಲಯ ಗೇಟ್ ಸಂಖ್ಯೆ 5ರ ಬಳಿ ರಕ್ಷಣಾ ಸಚಿವ ನಿರ್ಮಲಾ ಸೀತರಾಮನ್, ಗೃಹ ಸಚಿವ ಎಂ.ಬಿ.ಪಾಟೀಲ್, ಹಿರಿಯ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಹಾಗೂ ಸೇನಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.
ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ, ವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಕಾರಿನ ಸೈಲೆನ್ಸರ್ ನಿಂದ ಬೆಂಕಿಯ ಜ್ವಾಲೆ ಆರಂಭವಾಗಿದೆ. ಇದರಿಂದ ಬೆಂಕಿ ಕಾಣಿಸಿ ಕೊಂಡು, ಗಾಳಿ ಹೆಚ್ಚಾಗಿದ್ದ ಕಾರಣ ಎಲ್ಲ ಕಾರಿಗಳಿಗೂ ತಗುಲಿ ಈ ದುರ್ಘಟನೆ ನಡೆದಿದೆ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಎಫ್‌ಐಆರ್ ದಾಖಲು: ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಯು ಸೇನಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಪೊಲೀಸರು ರವಿವಾರ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ನಡೆಸಿದರು. ಘಟನೆಯಲ್ಲಿ 277 ಕಾರುಗಳು ಸಂಪೂರ್ಣ ಸುಟ್ಟುಹೋಗಿದ್ದು, ಸ್ಥಳಕ್ಕೆ ತೆರಳಿ ಪ್ರತ್ಯಕ್ಷದರ್ಶಿಗಳು, ಕಾರು ಮಾಲಕರು ಹಾಗೂ ವಾಯು ಸೇನೆಯ ಅಧಿಕಾರಿಗಳ ಹೇಳಿಕೆಯನ್ನ ದಾಖಲು ಮಾಡಲಾಯಿತು ಎಂದು ತಿಳಿದುಬಂದಿದೆ.
ಆರ್‌ಟಿಒ ಭೇಟಿ: ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಆರ್‌ಟಿಒ ಹೆಚ್ಚುವರಿ ಆಯುಕ್ತ ಸಿ.ಪಿ.ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ, ದಾಖಲೆ ಪತ್ರಗಳಿಲ್ಲದೆ, ಕಾರುಗಳಿಗೆ ಸೂಕ್ತ ರೀತಿಯಲ್ಲಿ ದಾಖಲೆ ಒದಗಿಸುವ ಭರವಸೆ ನೀಡಿದರು.
ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ವಿಮಾ ಕಂಪೆನಿಯ ಶ್ರೀಕಾಂತ್ ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕೃತಿ ವಿಕೋಪದಿಂದ ಈ ಘಟನೆ ನಡೆದಿದೆ. ಗ್ರಾಹಕರಿಗೆ ಇನ್ಶೂರೆನ್ಸ್ ಕಂಪೆನಿಗಳು ಸಹಾಯ ಮಾಡಲಿವೆ ಎಂದರು.
ತಮ್ಮ ವಾಹನದ ವಿಮೆ ಅಡಿಯಲ್ಲಿ ಬರಲು ಕೆಲವೊಂದು ದಾಖಲೆಗಳು ಬೇಕು. ಅವುಗಳನ್ನು ನೀಡಿದರೆ 20-25 ದಿನದಲ್ಲಿ ವಿಮೆ ಬರಲಿದೆ. ವಾಹನ ದಾಖಲೆಗಳು ಸುಟ್ಟು ಹೋಗಿದ್ದರೆ, ಆ ದಾಖಲೆಗಳನ್ನು ಆರ್‌ಟಿಓ ಕಚೇರಿಯಲ್ಲಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಮತ್ತೆ ಬೆಂಕಿ...!
ವಾಯು ನೆಲೆ ಸಮೀಪದ ಸಿಂಗನಾಯಕನಹಳ್ಳಿ ಬಳಿ ಇರುವ ಜಾರಕಿಬಂಡೆ ಕಿರು ಅರಣ್ಯ ಪ್ರದೇಶದಲ್ಲಿ ರವಿವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ. ಇಲ್ಲಿನ ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂದಿರುವ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಮಾಹಿತಿ ಪಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಯಲಹಂಕ ವಾಯುನೆಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು. ಅಗ್ನಿ ಅವಘಡದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾರು ಕಳೆದುಕೊಂಡವರಿಗೆ ಶೀಘ್ರದಲ್ಲಿಯೇ ಪರಿಹಾರ ನೀಡುವ ಸಂಬಂಧ ಚರ್ಚಿಸಿದರು ಎನ್ನಲಾಗಿದೆ.
ಪಾರ್ಕಿಂಗ್ ಸುರಕ್ಷತೆ: ಫೆ.25 ರಂದು ಬಿಬಿಎಂಪಿ ಸಭೆ
ಯಲಹಂಕ ವಾಯುನೆಲೆ ವ್ಯಾಪ್ತಿಯಲ್ಲಿ ಕಾರುಗಳ ದುರಂತದ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ವಾಹನ ನಿಲುಗಡೆ ಸ್ಥಳಗಳಲ್ಲಿ ಕೈಗೊಂಡಿರುವ ಸುರಕ್ಷತೆ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಫೆ.25 ರಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಅಧಿಕಾರಿಗಳ ಸಭೆ ಕರೆದಿದ್ದಾರೆ.