ವೈಮಾನಿಕ ಪ್ರದರ್ಶನದಲ್ಲಿ ಕೇಂದ್ರವೇ ಹೆಚ್ಚು ಜವಾಬ್ದಾರಿ ವಹಿಸಿತ್ತು: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-02-24 13:03 GMT

ಬೆಂಗಳೂರು, ಫೆ.24: ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಕೇಂದ್ರ ಸರಕಾರವೇ ಹೆಚ್ಚು ಜವಾಬ್ದಾರಿ ವಹಿಸಿತ್ತು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದರು.

ರವಿವಾರ ಯಲಹಂಕ ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಮಾನಿಕ ಪ್ರದರ್ಶನ ಸ್ಥಳವನ್ನು ಮೊದಲು ನಿರ್ಧಾರಿಸಲಾಗಿತ್ತು. ವಾಯು ನೆಲೆಯಲ್ಲಿ ಸಿಎಸ್‌ಎಫ್ ಹಾಗೂ ಐಎಎಫ್ ಜವಾಬ್ದಾರಿ ನಿರ್ವಹಿಸಿದ್ದರು. ರಾಜ್ಯ ಪೊಲೀಸರು ಹೊರಗಿನ ಜವಾಬ್ದಾರಿ ಹೊತ್ತಿದ್ದರು ಎಂದರು.

ಅವಘಡದಲ್ಲಿ ಕಾರು ಕಳೆದುಕೊಂಡವರಿಗೆ ನೋವಾಗಿದೆ. ಇದು ತುಂಬಾ ಸೂಕ್ಷ್ಮವಾದ ವಿಚಾರ ಎಂದ ಅವರು, ವೈಮಾನಿಕ ಪ್ರದರ್ಶನ ಆಯೋಜನೆಯಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಪಾತ್ರ ವಹಿಸುತ್ತವೆ. ಆದರೆ, ನಾನು ಒಂದು ಸರಕಾರದ ಮೇಲೆ ಆರೋಪ ಮಾಡುವುದಿಲ್ಲ ಎಂದು ತಿಳಿಸಿದರು.

ಘಟನೆ ಸಂಭವಿಸಿದಾಗ ನಾಲ್ಕು ನಿಮಿಷದಲ್ಲಿ ನಮ್ಮ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಆದರೆ, ಹುಲ್ಲು ಹಾಗೂ ಡಿಸೇಲ್, ಪೆಟ್ರೋಲ್‌ಗಳಿದ್ದ ವಾಹನಗಳಿಂದ ದೊಡ್ಡ ಅವಘಡಕ್ಕೆ ಕಾರಣವಾಗಿದೆ. ಘಟನೆ ಯಲ್ಲಿ ಸುಮಾರು 277 ಕಾರುಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ. ಅವರಿಗೆ ರಾಜಕೀಯ ಮಾಡುವ ಮನಸ್ಸಾಗಿರಬೇಕು. ಆದರೆ, ಅವಘಡದಲ್ಲಿ ನೊಂದವರಿಗೆ ಸ್ಪಂದಿಸುವುದು ನಮ್ಮ ಆದ್ಯತೆ ಎಂದು ಎಂ.ಬಿ.ಪಾಟೀಲ್ ನುಡಿದರು.

ಈ ವೇಳೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಅಗ್ನಿ ಶಾಮಕ ದಳದ ಮಹಾನಿರ್ದೇಶಕ ಎಂ.ಎನ್.ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News