ಏರೋ ಇಂಡಿಯಾ ವೈಮಾನಿಕ ಹಬ್ಬಕ್ಕೆ ವಿಧ್ಯುಕ್ತ ತೆರೆ

Update: 2019-02-24 14:01 GMT

ಬೆಂಗಳೂರು, ಫೆ.24: ಬಾನಂಗಳದಲ್ಲಿ ಯುದ್ಧ ವಿಮಾನಗಳ ಚಿತ್ತಾರ, ಆರ್ಭಟ ಕೊನೆಗೊಳ್ಳುವುದರೊಂದಿಗೆ ಐದು ದಿನಗಳ ವರ್ಣರಂಜಿತ ‘ಏರೋ ಇಂಡಿಯಾ- 12ನೆ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ರವಿವಾರ ಸಂಜೆ ವಿಧ್ಯುಕ್ತ ತೆರೆ ಬಿದ್ದಿದೆ.

ನಗರದ ಯಲಹಂಕ ವಾಯು ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಎಚ್‌ಎಎಲ್, ಎನ್‌ಎಎಲ್, ಬಿಇಎಲ್, ಡಿಆರ್‌ಡಿಒ ಸೇರಿದಂತೆ ಪ್ರಮುಖ ಸಂಸ್ಥೆಗಳ ಸಂಶೋಧನೆಗಳು, ವಿಮಾನ ಅಭಿವೃದ್ಧಿ, ರಕ್ಷಣಾ ಉತ್ಪನ್ನಗಳ ಆವಿಷ್ಕಾರ ಪ್ರದರ್ಶನಕ್ಕಿಟ್ಟಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗ್ರಾಹಕರ ಗಮನ ಸೆಳೆದವು. ಮತ್ತೊಂದೆಡೆ ಏರ್‌ಬಸ್, ಬೋಯಿಂಗ್, ಬಿಇಎ ಸೇರಿದಂತೆ ನೂರಾರು ವಿದೇಶಿ ಕಂಪೆನಿಗಳು ದೇಶದಲ್ಲಿ ವಿವಿಧ ಕಂಪೆನಿಗಳ ಸಹಭಾಗಿತ್ವದಲ್ಲಿ ವೈಮಾನಿಕ ಹಾಗೂ ರಕ್ಷಣಾ ವಲಯದ ಸಾಧನಗಳ ಉತ್ಪಾದನೆ, ಅಭಿವೃದ್ಧಿ, ಸಂಶೋಧನೆ, ತರಬೇತಿ ಕೇಂದ್ರ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡವು. ಐದು ದಿನಗಳ ಅವಧಿಯಲ್ಲಿ ಮೂರು ದಿನಗಳ ಕಾಲ ವ್ಯಾಪಾರ ಹಾಗೂ ಉದ್ಯಮ ಒಪ್ಪಂದಗಳು ನಡೆದಿವೆ.

ಆರುವರೆ ಲಕ್ಷ ಜನರಿಂದ ವೀಕ್ಷಣೆ: ವೈಮಾನಿಕ ಪ್ರದರ್ಶನದ ಮೊದಲ ಮೂರು ದಿನ ವ್ಯವಹಾರ ಉದ್ದೇಶದ ಒಂದೂವರೆ ಲಕ್ಷ ಜನರು ಹಾಗೂ ಕೊನೆಯ ಎರಡು ದಿನ ಅಂದಾಜು 4 ಲಕ್ಷ ಸಾಮಾನ್ಯ ಜನರು ಸೇರಿ ಒಟ್ಟು ಐದೂವರೆ ಲಕ್ಷ ಜನರು ಏರೋ ಶೋ ವೀಕ್ಷಿಸಿದ್ದಾರೆಂದು ತಿಳಿದುಬಂದಿದೆ.

ದುರ್ಘಟನೆಗಳು: ಏರೋ ಇಂಡಿಯಾ ಪ್ರದರ್ಶನ ಆರಂಭಕ್ಕೂ ಆರು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. 40ಕ್ಕೂ ಹೆಚ್ಚು ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಆ ಸೂತಕದ ಛಾಯೆಯೊಂದಿಗೆ ನಿಗದಿಯಾಗಿದ್ದ ಏರ್ ಶೋ ಪ್ರಾರಂಭಗೊಳ್ಳುವುದಿತ್ತು. ಆದರೆ, ಫೆ.19ರಂದು ಸೂರ್ಯಕಿರಣ ಯುದ್ಧ ವಿಮಾನಗಳು ತಾಲೀಮು ನಡೆಸುವಾಗ ಪರಸ್ಪರ ಢಿಕ್ಕಿ ಹೊಡೆದು ಪೈಲಟ್ ಸಾಹಿಲ್ ಗಾಂಧಿ ಮೃತಪಟ್ಟರು. ಅನಂತರ, ಫೆ.23ರಂದು ಬೆಂಕಿ ಅವಘಡದಲ್ಲಿ 277 ಕಾರುಗಳು ಸುಟ್ಟು ಭಸ್ಮವಾದವು.

ಏರ್ ಶೋ ಮೊದಲ ದಿನ ಕೇಂದ್ರ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ ಬಳಿಕ, ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಉಸ್ತುವಾರಿ ನಿರ್ವಹಿಸಿದ್ದರು. ಪ್ರಧಾನಮಂತ್ರಿಗಳ ರಕ್ಷಣಾ ಸಲಹೆಗಾರರಾದ ಪ್ರೊ.ವಿಜಯ ರಾಘವನ್, ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸೇರಿದಂತೆ ಗಣ್ಯಾತಿಗಣ್ಯರು ತೇಜಸ್ ಸ್ವದೇಶಿ ನಿರ್ಮಿತ ವಿಮಾನದಲ್ಲಿ ಹಾರಾಟ ನಡೆಸಿದರು. ಅಮೆರಿಕಾ, ಇಸ್ರೇಲ್, ರಷ್ಯಾ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳ ವಾಯುಪಡೆಗಳು ಏರೋ ಇಂಡಿಯಾದಲ್ಲಿ ಭಾಗವಹಿಸಿದ್ದವು.

ಪ್ರದರ್ಶನ ಮಳಿಗೆಗಳು: ಒಂದೆಡೆ ಲೋಹದ ಹಕ್ಕಿಗಳ ಕಲರವ ಪ್ರೇಕ್ಷಕರ ಮನಸೂರೆಗೊಂಡರೆ, ಮತ್ತೊಂದೆಡೆ ಏರ್ ಇಂಡಿಯಾ ಆಯೋಜಿಸಲಾಗಿದ್ದ 403 ಪ್ರದರ್ಶನ ಮಳಿಗೆಗಳು ಮಾಹಿತಿ ಕೇಂದ್ರಗಳಾಗಿದ್ದವು.

ಇಲ್ಲಿನ ಪ್ರತಿಯೊಂದು ಮಳಿಗೆಯಲ್ಲೂ ಯುದ್ಧ ಸಲಕರಣೆಗಳು, ರಕ್ಷಣಾ ಸಾಮಗ್ರಿಗಳು, ದೇಶ ರಕ್ಷಣೆಗೆ ಬಳಸುವ ಪರಿಕರಗಳು, ನಾಗರಿಕ ವಿಮಾನ ಯಾನದ ವ್ಯವಸ್ಥೆಗಳು ಪ್ರದರ್ಶನಗೊಂಡವು. ಒಟ್ಟಾರೆಯಾಗಿ ಐದು ದಿನಗಳ ಏರೋ ಇಂಡಿಯಾ ಪ್ರದರ್ಶನ ಮತ್ತೊಮ್ಮೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಹಲವು ಅವಘಡಗಳ ನಡುವೆಯೂ ಯಶಸ್ವಿಯಾಗಿ ತೆರೆ ಕಂಡಿದೆ.

ಚಾಲಾಕಿ ಪ್ರದರ್ಶನ

ಅಂತಿಮ ಹಂತದ ಪ್ರದರ್ಶನದಲ್ಲಿ ಸೂರ್ಯಕಿರಣ, ನೇತ್ರ, ಯಾಕ್, ರುದ್ರ, ತೇಜಸ್, ಧನುಷ್, ಭೀಮ್, ಡ್ರೋಣ್, ಡಕೋಟಾ, ಸಾರಂಗ್, ರಫೇಲ್ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಆಗಸದಲ್ಲಿ ಚಾಲಾಕಿ ಪ್ರದರ್ಶನ ನೀಡಿದವು.

ಸುಡುಬಿಸಿನಲ್ಲಿ ವಾಹನ ಸವಾರರು..!

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ನಗರದ ವಿಮಾನ ನಿಲ್ದಾಣ ರಸ್ತೆಯ ಉದ್ದಕ್ಕೂ ವಾಹನ ದಟ್ಟಣೆ ಅಧಿಕವಾಗಿತ್ತು. ಸುಡುಬಿಸಿಲಿನಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹುಣಸಮಾರನಹಳ್ಳಿಯಿಂದ ಯಲಹಂಕದ ಕೋಗಿಲು ವೃತ್ತದವರೆಗೆ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ವಾಹನ ಇಲ್ದಾಣ ಮಾಡುವ ಗೇಟ್ ಸಂಖ್ಯೆ 5,6 ಹಾಗೂ7ರ ಬಳಿಯೂ ದಟ್ಟಣೆ ಎದ್ದು ಅಧಿಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News