×
Ad

ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶಿಕ್ಷಕ ವರ್ಗ ಗಮನಹರಿಸಬೇಕು: ಸಚಿವ ವೆಂಕಟರಾವ್ ನಾಡಗೌಡ

Update: 2019-02-24 19:36 IST

ಬೆಂಗಳೂರು, ಫೆ.24: ಭವಿಷ್ಯತ್ತಿನಲ್ಲಿ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡುವತ್ತ ಶಿಕ್ಷಕ ವರ್ಗ ಗಮನ ಹರಿಸಬೇಕು ಎಂದು ಪಶು ಸಂಗೋಪಾಲನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ರವಿವಾರ ನಗರದ ಶಾಸಕರ ಭವನದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ಸಂಘದ ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ದೇಶಕಟ್ಟುವ ಶಿಲ್ಪಿಗಳಾಗಿದ್ದು, ಭಾರತದ ಭವಿಷ್ಯ ಇವರ ಮೇಲೆ ನಿಂತಿದೆ ಎಂದು ತಿಳಿಸಿದರು.

ರಾಜ್ಯ ಉಪನ್ಯಾಸಕರ ಸಂಘದ ಚುನಾವಣೆ ಪಾರದರ್ಶಕ ರೀತಿಯಲ್ಲಿ ನಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಹಿಂದೆ ಶಕ್ತಿಯಿದ್ದವರು ಮಾತ್ರ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ರೀತಿಯ ಬದಲಾವಣೆ ತರಲಾಗಿದ್ದು, ಸಹಕಾರಿ ಕ್ಷೇತ್ರಗಳಲ್ಲಿನ ಚುನಾವಣಾ ಮಾದರಿಯನ್ನು ಉಪನ್ಯಾಸಕರ ಸಂಘ ಅಳವಡಿಸಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮೇ.2 ರಿಂದಲೇ ದ್ವಿತೀಯ ಪಿಯುಸಿ ತರಗತಿಗಳ ಆರಂಭದ ಬಗ್ಗೆ ಇಡೀ ಉಪನ್ಯಾಸ ವಲಯದಿಂದ ವಿರೋಧ ವ್ಯಕ್ತವಾಗಿದೆ. ಹಿಂದಿನ ವರ್ಷ ಸರಕಾರ ಈ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಬರಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಈ ವ್ಯವಸ್ಥೆಯನ್ನು ಸರಕಾರಿ ಕಾಲೇಜುಗಳಿಗೂ ಅಳವಡಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಉಪನ್ಯಾಸಕರು ಭಯ ಪಡುವ ಆಗತ್ಯವಿಲ್ಲ ಎಂದರು.

ಕರ್ನಾಟ ಶಿಕ್ಷಣ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದು ಆರನೇ ವೇತನ ಆಯೋಗದ ಜಾರಿ ಸೇರಿದಂತೆ ಉಪನ್ಯಾಸಕರ ಹಲವು ಬೇಡಿಕೆಗಳ ಈಡೇರಿಕೆಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಜೆಡಿಎಸ್ ಮುಖಂಡ ರಮೇಶ ಬಾಬು, ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಎಸ್.ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎ.ಎಚ್.ಲಿಂಗೇಗೌಡ, ಕೋಶಾಧ್ಯಕ್ಷ ಜಯಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News