ಸಂವಿಧಾನ ವಿರೋಧಿ ಕೃತ್ಯಗಳಿಗೆ ಪ್ರಧಾನಿ ಮೋದಿ ನೇರ ಕಾರಣ: ಪ್ರೊ.ರವಿವರ್ಮ ಕುಮಾರ್

Update: 2019-02-24 14:25 GMT

ಬೆಂಗಳೂರು, ಫೆ.24: ಕೇಂದ್ರ ಸಚಿವ ಅಂನತ ಕುಮಾರ್ ಹೆಗಡೆ ಹೋದಲ್ಲಿ, ಬಂದಲ್ಲಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣವೆಂದು ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ತಿಳಿಸಿದರು.

ರವಿವಾರ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಉಳಿಸಿ ಭಾರತ ರಕ್ಷಿಸಿ’ ಜನಾಗ್ರಹ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಕೇಂದ್ರ ಸಚಿವನಾಗಿರುವ ಅನಂತ ಕುಮಾರ್ ಹೆಗಡೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರ ದಲ್ಲಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಬಹಿರಂಗವಾಗಿ ಮಾತನಾಡಿದ್ದಾರೆ. ಪ್ರಧಾನಿ ಮೋದಿಗೆ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವವಿದಿದ್ದರೆ, ಅನಂತಕುಮಾರ್ ಹೆಗಡೆಯನ್ನು ಸಚಿವ ಸ್ಥಾನದಿಂದ ಕೈಬಿಡಬೇಕಾಗಿತ್ತು. ಆದರೆ, ಪ್ರಧಾನಿ ಮೋದಿ ಜಾನ ಮೌನ ವಹಿಸುವ ಮೂಲಕ ಸಂವಿಧಾನ ವಿರೋಧಿ ಕೃತ್ಯಗಳಿಗೆ ನೇರ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಕೆಲವು ತಿಂಗಳುಗಳ ಹಿಂದೆ ದೆಹಲಿಯ ಜಂತರ್‌ ಮಂತರಿನಲ್ಲಿ ಪುರೋಹಿತಶಾಹಿಗಳ ಗುಂಪು ಸಂವಿಧಾನವನ್ನು ಬಹಿರಂಗವಾಗಿ ಸುಟ್ಟು ಹಾಕಿದರು. ಇದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಯಿತು. ಆದರೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಯಾವುದೆ ಹೇಳಿಕೆ ನೀಡದೆ, ಪುರೋಹಿತಶಾಹಿಗಳ ಕೃತ್ಯಕ್ಕೆ ಬೆಂಬಲವಾಗಿ ನಿಂತರು ಎಂದು ಅವರು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಜಗತ್ತಿನಲ್ಲಿಯೆ ಶ್ರೇಷ್ಟವಾದ ಸಂವಿಧಾನವನ್ನು ಭಾರತಕ್ಕೆ ರಚಿಸಿ ಕೊಟ್ಟಿದ್ದಾರೆ. ನಮ್ಮ ಸಂವಿಧಾನದಲ್ಲಿರುವ ಅನೇಕ ಅಂಶಗಳನ್ನು ಅಮೇರಿಕಾ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳು ಅಳವಡಿಸಿಕೊಂಡಿವೆ. ಇಂತಹ ಶ್ರೇಷ್ಟವಾದ ಸಂವಿಧಾನವನ್ನು ಬಿಜೆಪಿ ನಾಯಕರು ಬದಲಿಸಲು ಹೊರಟಿದ್ದಾರೆ. ಇವರಿಗೆ ಜನತೆಯೆ ತಕ್ಕ ಶಾಸ್ತಿ ಮಾಡಬೇಕೆಂದು ಅವರು ಹೇಳಿದರು.

ಹಿರಿಯ ವಿಚಾರವಾದಿ ಜಿ.ಕೆ.ಗೋವಿಂದ ರಾವ್ ಮಾತನಾಡಿ, ಆರೆಸ್ಸೆಸ್ ಸಂಘಟನೆಗಳು ಜನವಿರೋಧಿ ಕೃತ್ಯವನ್ನು ಮುಂದುವರೆಸಿದೆ. ಈ ದೇಶದ ಸಾಮಾನ್ಯ ಜನತೆಗೆ ಆಳಿವು ಉಳಿವಿನ ಪ್ರಶ್ನೆಯಾಗಿದೆ. ಇಂತಹ ಸಂದರ್ಭದಲ್ಲಿ ದಲಿತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸಂಘಟನೆಗೊಂಡು ಜನರ ರಕ್ಷಣೆಯಲ್ಲಿ ತೊಡಗಬೇಕಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಆಧುನಿಕತೆಯ ತಕ್ಕಂತೆ ಕೋಮುವಾದಿ ಶಕ್ತಿಗಳು ತಮ್ಮ ಕಾರ್ಯತಂತ್ರಗಳನ್ನು ಬದಲಿಸುತ್ತಾ ಮನುವಾದಿ ಚಿಂತನೆಗಳನ್ನು ಜನತೆಯಲ್ಲಿ ಭಿತ್ತುವಲ್ಲಿ ಯಶಸ್ವಿಯಾಗುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಲಿ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿಯ ಸಂಯೋಜಕ ವಿ.ನಾಗರಾಜ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ನೀಡಿದ ಭರವಸೆಯ ಮಾತನ್ನು ನಂಬಿ ಜನತೆ ಅವರಿಗೆ ಅಧಿಕಾರ ಕೊಟ್ಟರು. ಆದರೆ, ಪ್ರಧಾನಿ ಹುದ್ದೆಗೇರಿದ ಮೋದಿ ಜನರ ವಿಶ್ವಾಸಕ್ಕೆ ದ್ರೋಹ ಬಗೆದು ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದರು ಎಂದು ಆರೋಪಿಸಿದರು.

ಈ ಬಾರಿಯ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಜನತೆಗೆ ಸುಳ್ಳುಗಳನ್ನು ಭಿತ್ತಲು ಹೊರಟಿದ್ದಾರೆ. ಇವರ ಮಾತಿಗೆ ಮರುಳಾಗದಂತೆ ಜನತೆಯನ್ನು ಎಚ್ಚರಿಸಬೇಕಾದದ್ದು ಜನಪರ ಸಂಘಟನೆಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಈ ವೇಳೆ ದಲಿತ ಮುಖಂಡ ರುದ್ರಪ್ಪ ಹನಗವಾಡಿ, ರೈತ ಸಂಘದ ಮುಖಂಡ ಬಡಗಪುರ ನಾಗೇಂದ್ರ, ಸ್ವರಾಜ್ ಇಂಡಿಯಾದ ನರಸಿಂಹ ಮೂರ್ತಿ, ಜನವಾದಿ ಸಂಘಟನೆಯ ವಿ.ಗೀತಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News