ಜ್ಞಾನ ವಿಸ್ತರಣೆಗೆ ಗ್ರಂಥಾಲಯಗಳು ಸಹಕಾರಿ: ರಾಮಲಿಂಗಾರೆಡ್ಡಿ

Update: 2019-02-24 14:49 GMT

ಬೆಂಗಳೂರು, ಫೆ.24: ಬಸವನಗುಡಿಯ ಎಮ್.ಎನ್.ಕೃಷ್ಣರಾವ್ ಉದ್ಯಾನದಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನವೀಕೃತಗೊಂಡಿರುವ ಪಾರಂಪರಿಕ ಕಟ್ಟಡದಲ್ಲಿ ದಕ್ಷಿಣ ವಲಯ ನಗರ ಕೇಂದ್ರ ಗ್ರಂಥಾಲಯದ ‘ಸರ್.ಎಮ್.ಎನ್.ಕೃಷ್ಣರಾವ್ 37ನೇ ಶಾಖಾ ಗ್ರಂಥಾಲಯ’ದ ಲೋಕಾರ್ಪಣೆ ರವಿವಾರ ನೆರವೇರಿತು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ದಕ್ಷಿಣ ವಲಯ ನಗರ ಕೇಂದ್ರ ಗ್ರಂಥಾಲಯ ಎಮ್.ಎನ್.ಕೃಷ್ಣರಾವ್ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಖಾ ಗ್ರಂಥಾಲಯವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಜ್ಞಾನ ವಿಸ್ತರಣೆಗೆ ಗ್ರಂಥಾಲಯಗಳು ಸಹಕಾರಿ ಎಂದು ಹೇಳಿದರು.

ಇದೇ ವೇಳೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಪ್ರಮಾಣ ಪತ್ರ, ಬೃಹತ್ ಬೆಂಗಳೂರು ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಆಟೋ ಚಾಲಕರಿಗೆ ಕೀ ವಿತರಿಸಿದರು.

ನಂತರ ಮಾತನಾಡಿದ ಅವರು, ಇಲ್ಲಿನ ನಿವಾಸಿಗಳ ಹಲವು ದಿನಗಳ ಕನಸು ಇಂದು ನನಸಾಗಿದೆ. ಸಂಪೂರ್ಣವಾಗಿ ಪಾಳುಬಿದ್ದ ಕಟ್ಟಡಕ್ಕೆ ಹೊಸ ರೂಪ ನೀಡಿ ಗ್ರಂಥಾಲಯವನ್ನಾಗಿ ಮಾರ್ಪಾಡು ಮಾಡಲಾಗಿದೆ. ಉತ್ತಮ ಶೌಚಾಲಯ ವ್ಯವಸ್ಥೆಯೊಂದಿಗೆ ಸಾರ್ವಜನಿಕರ ಅನುಕೂಲಕ್ಕೆ ಅಗತ್ಯವಿರುವ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳು, ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬರೂ ಇದರ ಉಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಸಹ ನಿರ್ಮಿಸಲಾಗುವುದು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ವಾಹನ ನಿಲುಗಡೆ ಪ್ರದೇಶಗಳಲ್ಲಿ ಟೆಂಡರ್ ಕರೆದು ನಿರ್ವಹಣೆ ಮಾಡಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಯಾರೋ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವಂಥ ಪರಿಸ್ಥಿತಿ ಇದೆ. ಇಂತಹ ಕಡೆಗಳಲ್ಲಿ ಸೂಕ್ತ ಭದ್ರತೆಯೂ ಇಲ್ಲದಂತಾಗಿದೆ. ಹಾಗಾಗಿ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಟೆಂಡರ್ ಕರೆಯದಿರುವ ಪ್ರದೇಶಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಎಲ್ಲಾ ಪ್ರದೇಶಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಎಸ್.ಹೊಸಮನಿ ಮಾತನಾಡಿ, ಮಕ್ಕಳು ಪಠ್ಯೇತರ ಚಟುವಟಿಕೆ ಜತೆಗೆ ತಮಗಿಷ್ಟವಾದ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಗ್ರಂಥಾಲಯದಲ್ಲಿ ಮಕ್ಕಳು, ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಜ್ಞಾನ ಭಂಡಾರದ ಪ್ರಯೋಜನವನ್ನು ಮಕ್ಕಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ಈ ವೇಳೆ ಪಾಲಿಕೆ ಸದಸ್ಯ ಉದಯ ಬಿ.ಗರುಡಾಚಾರ್, ನಗರ ಕೇಂದ್ರ ಗ್ರಂಥಾಲಯ ದಕ್ಷಿಣ ವಲಯ ಉಪ ನಿರ್ದೇಶಕಿ ಸರಸ್ವತಿ, ಬಿಬಿಎಂಪಿ ಜಂಟಿ ಆಯುಕ್ತ ವಿಶ್ವನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News