ಪ್ರಗತಿಪರ ವಿಚಾರಧಾರೆಗಳು ಹಿಂದೆ ಸರಿಯುತ್ತಿವೆ: ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ
ಬೆಂಗಳೂರು, ಫೆ.24: ರಾಜ್ಯದಲ್ಲಿ ಪ್ರಗತಿಪರ ವಿಚಾರಧಾರೆಗಳು ಹಿಂದೆ ಸರಿಯುತ್ತಿದ್ದು, ಮೂಲಭೂತವಾದಿ, ಕೋಮುವಾದಿ ವಿಚಾರಧಾರೆಗಳು ಮುನ್ನೆಲೆಗೆ ಬರುತ್ತಿವೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಅಖಿಲ ಕರ್ನಾಟಕ ವಿಚಾರವಾದಿಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರೊ.ಎ.ಎಸ್.ನಟರಾಜ್‌ರ ರಾಜ್ ವೈಚಾರಿಕ ವೇದಿಕೆಯ 5 ನೆ ವರ್ಷದ 2019 ನೆ ಸಾಲಿನ ‘ಕರ್ನಾಟಕ ಮಹಾ ವಿಚಾರರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರೇ ಅಂತರ್ ಜಾತೀಯ ವಿವಾಹಗಳನ್ನು ಮಾಡಿಸುತ್ತಿದ್ದರು. ಆದರೆ, ಇಂದು ಬೇರೆ ಜಾತಿಯ ಹುಡುಗ-ಹುಡುಗಿ ಪ್ರೀತಿಸಿದರೆ ಅಪ್ಪ, ಅಣ್ಣ-ತಮ್ಮಂದಿರೇ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹತ್ಯೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂದು ನೇರವಾಗಿ ಮೂಢನಂಬಿಕೆ, ಕಂದಾಚಾರಗಳನ್ನು ಪ್ರಶ್ನಿಸಲು ಅವಕಾಶವಿತ್ತು. ಇಂದು ಸತ್ಯವನ್ನು ಹೇಳುವವರನ್ನು ಸಾಯಿಸಲಾಗುತ್ತಿದೆ ಎಂದು ವಿಷಾಧಿಸಿದರು.
ಕರ್ನಾಟಕದಲ್ಲಿ ಮಹಾರಾಷ್ಟ್ರದ ನಂತರ ಬಲಿಷ್ಟವಾದ ದಲಿತ ಚಳವಳಿ ರೂಪಗೊಂಡಿತ್ತು. ಇಡೀ ದೇಶವೇ ರಾಜ್ಯದ ಕಡೆಗೆ ತಿರುಗಿ ನೋಡುವಂತೆ ಚಳವಳಿಗಳು ಇಲ್ಲಿಂದ ನಡೆಯುತ್ತಿದ್ದವು. ಒಂದು ಕಡೆ ರೈತ ಚಳವಳಿಯಿದ್ದರೆ ಮತ್ತೊಂದು ಕಡೆ ಕಮ್ಯುನಿಸ್ಟ್ ಚಳವಳಿಗಳು ಹುಟ್ಟಿಕೊಂಡಿದ್ದವು. ಆದರೆ, ಇತ್ತೀಚಿನ ಚಳವಳಿಗಳ ಸ್ಥಿತಿ ನೋಡಿದರೆ ಸಂಕಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
70 ರ ದಶಕದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯಲ್ಲಿ ಹೊಸ ದಿಕ್ಕಿನ ರಾಜಕಾರಣವನ್ನು ದೇಶಕ್ಕೆ ಮಾದರಿಯಾಗಿ ತೋರಿಸಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಸಮಿತಿ ರಚನೆ ಮಾಡಿ ಮೀಸಲಾತಿ ನೀಡಿದ್ದು ದೇವರಾಜ ಅರಸು ಅವಧಿಯಲ್ಲಿ. ಆದರೆ, ಇಂದಿನ ಸ್ಥಿತಿ ಅತ್ಯಂತ ಗಂಭೀರವಾದ ಬದಲಾವಣೆ ಕಂಡಿದ್ದು, ಚಳವಳಿಗಳು ಕ್ಷೀಣಿಸುತ್ತಿವೆ. ಈ ಕುರಿತು ಆತ್ಮವಾಲೋಕನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ವಚನ ಚಳವಳಿ ಹಾಗೂ ಅಂಬೇಡ್ಕರ್ ವಾದ ವ್ಯಾಪಕವಾದ ಪ್ರಭಾವ ಬೀರಿದೆ. ಹೀಗಾಗಿ, ವಚನ ಚಳವಳಿ, ಅಂಬೇಡ್ಕರ್ ವಾದ, ಪ್ರಗತಿಪರರ ಚಳವಳಿಯಿದ್ದು, ಕೋಮುವಾದ ಪ್ರವೇಶ ಅಸಾಧ್ಯ ಎಂದುಕೊಂಡಿದ್ದೆವು. ಆದರೆ, ಬಸವಣ್ಣರ ವಿಚಾರಧಾರೆಗಳನ್ನು ಪಾಲಿಸುವವರೇ ಅವರ ವಿಚಾರಗಳಿಗೆ ವಿರುದ್ಧವಾಗಿ ಕೋಮುವಾದವನ್ನು ಬೆಂಬಲಿಸುತ್ತಿದ್ದಾರೆ. ಇಂದು ಅದು ದೊಡ್ಡದಾದ ಮರವಾಗಿ ಬೆಳೆದು ನಿಂತಿದೆ ಎಂದರು.
ದೇಶದಲ್ಲಿ ನಾನು ಹೇಳಿದ್ದನ್ನಷ್ಟೇ ಕೇಳಬೇಕು. ನಾನು ನಿರ್ಧರಿಸಿದ ಆಹಾರ ಸೇವಿಸಬೇಕು, ಬಟ್ಟೆ ಧರಿಸಬೇಕು ಎಂಬ ವಾದ ಬೆಳೆದಿದೆ. ನಾನು ನಂಬಿದ ತತ್ವಗಳ ಪರವಾಗಿ ಮಾತನಾಡುವವರನ್ನು ದಮನ ಮಾಡಲಾಗುತ್ತಿದೆ. ಅನಗತ್ಯ ವಿಚಾರಗಳಿಗೆ ದೇಶಭಕ್ತಿಯ ಪಟ್ಟ ಕಟ್ಟಲಾಗುತ್ತಿದೆ ಎಂದ ಅವರು, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ಧಾಬೋಲ್ಕರ್ ಹಾಗೂ ಎಂ.ಎಂ.ಕಲಬುರ್ಗಿಯನ್ನು ಸತ್ಯವನ್ನು ಮಾತನಾಡಿದ್ದಕ್ಕಾಗಿ ಒಂದು ವರ್ಗದ ಗುಂಪುಗಳು ಹತ್ಯೆ ಮಾಡಲಾಗುತ್ತಿದೆ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ವಿಚಾರವಾದಿ ಡಾ.ಎಂ.ಎನ್.ಕೇಶವ್‌ರಾವ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಎ.ಎಸ್.ನಟರಾಜ್ ಸೇರಿದಂತೆ ಮತ್ತಿತರಿದ್ದರು.