ಬಾಹ್ಯಾಕಾಶ ಯಾನಿಗಳಿಗೆ ಡಿಎಫ್‌ಆರ್‌ಎಲ್‌ನ ‘ಫೆವರಿಟ್ ಮೆನ್’ ಸಿದ್ಧ
ಬೆಂಗಳೂರು, ಫೆ.24: ಮೈಸೂರಿನ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್)ವು 2022ರ ದೇಶದ ಬಹು ನಿರೀಕ್ಷಿತ ಗಗನಯಾನ ಯೋಜನೆಯಡಿ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಯಾನಿಗಳಿಗೆ ‘ಫೆವರಿಟ್ ಮೆನ್’ ಸಿದ್ಧಪಡಿಸಿದ್ದು, ಅದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಕಳುಹಿಸಿಕೊಟ್ಟಿದೆ.
ಪ್ರಯಾಣ ಬೆಳೆಸಲಿರುವ ವಿಜ್ಞಾನಿಗಳು, ತಜ್ಞರೆಲ್ಲರ ಅಭಿಪ್ರಾಯ ಸಂಗ್ರಹಿಸಿ, ಈ ಆಹಾರಗಳನ್ನು ಸಿದ್ಧಪಡಿಸಿ ಪೂರೈಸಲಾಗಿದ್ದು, ಅದರಲ್ಲಿ ಎಗ್‌ಕಟ್ಟಿ ರೋಲ್, ಚಿಕ್ಕನ್‌ಕಟ್ಟಿ ರೋಲ್, ವೆಜ್‌ಕಟ್ಟಿ ರೋಲ್, ಫ್ರೀಜ್ ಮಾಡಿದ ಮ್ಯಾಂಗೋ ಮತ್ತು ಪೈನಾಪಲ್ ಜ್ಯೂಸ್ ಸೇರಿದಂತೆ 15 ಆಹಾರ ಪದಾರ್ಥಗಳ ಪಟ್ಟಿಯನ್ನು ಕಳುಹಿಸಲಾಗಿದೆ.
ಆಹಾರ ಪದಾರ್ಥಗಳನ್ನು ಅತಿ ಹೆಚ್ಚು ಒತ್ತಡ ಮತ್ತು ಉಷ್ಣಾಂಶದಲ್ಲಿ ಬೇಯಿಸಿ ತಯಾರಿಸಲಾಗಿದ್ದು, ಭೂಮಿಯಿಂದ ಬಾಹ್ಯಾಕಾಶಕ್ಕೆ ಯಾವುದೇ ಸೂಕ್ಷ್ಮಾಣುಜೀವಿ ಹೋಗದಂತೆ ತುಂಬಾ ಎಚ್ಚರಿಕೆ ವಹಿಸಲಾಗಿದ್ದು, ಅದನ್ನು ಪರೀಕ್ಷೆಗೊಳಪಡಿಸಿ, ಹಲವು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಅಂತಿಮಗೊಳಿಸಲಾಗುತ್ತದೆ. ಅಲ್ಲದೆ, 1980ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದ ರಾಕೇಶ್ ಶರ್ಮ ಅವರಿಗೂ ಡಿಎಫ್‌ಆರ್‌ಎಲ್‌ನಿಂದ ಆಹಾರ ಪೂರೈಸಲಾಗಿತ್ತು. ಅವರು ಅಂದು ಮ್ಯಾಂಗೋ ಬಾರ್‌ಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಡಿಎಫ್‌ಆರ್‌ಎಲ್‌ನ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದರು.
ಮೂರು ಯಾನಿಗಳ ಆಯ್ಕೆ: ಯಾನಕ್ಕೆ ಮೊದಲ ಹಂತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟಾರೆ ಹತ್ತು ಜನರನ್ನು ಆಯ್ಕೆ ಮಾಡಲಾಗಿದ್ದು, ಅವರೆಲ್ಲರಿಗೆ ತರಬೇತಿ ನೀಡಲಾಗುತ್ತಿದ್ದು, ಆಹಾರ ಸೇವನೆಯೂ ಆ ತರಬೇತಿಯಲ್ಲಿ ಒಂದಾಗಿದೆ. ಅಂತಿಮವಾಗಿ ಈ ಪೈಕಿ ಮೂವರನ್ನು ಯಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಎಲ್ಲವೂ ಗಾಳಿಯಲ್ಲಿ ತೇಲುತ್ತಿರುತ್ತದೆ. ಹೀಗಾಗಿ, ಪ್ರಾಥಮಿಕ ಹಂತದಲ್ಲಿ ತಯಾರಿಸಿದ ಮೆನು ಅಲ್ಲಿನ ವಾತಾವರಣಕ್ಕೆ ಹೊಂದುತ್ತದೆ.
- ಪಾಲ್ ಮಧುಕರನ್, ಡಿಎಫ್‌ಆರ್‌ಎಲ್‌ನ ವಿಜ್ಞಾನಿ