ಆಸ್ಕರ್ ಪ್ರಶಸ್ತಿ ಪ್ರದಾನ: ಯಾವ ಚಿತ್ರಕ್ಕೆ ಅಗ್ರಪಟ್ಟ ?

Update: 2019-02-25 16:26 GMT

ಲಾಸ್ ಏಂಜಲಿಸ್, ಫೆ. 25: 91ನೇ ಆಸ್ಕರ್ ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಲಾಸ್ ಏಂಜಲಿಸ್‌ನಲ್ಲಿ ನಡೆಯಿತು.

ನೆಟ್‌ಫ್ಲಿಕ್ಸ್‌ನ ‘ರೋಮಾ’ ಚಿತ್ರವನ್ನು ಹಿಂದಿಕ್ಕಿ ಪೀಟರ್ ಫ್ಯಾರೆಲಿ ನಿರ್ದೇಶನದ ‘ಗ್ರೀನ್ ಬುಕ್’ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದಿದೆ. ಇದೇ ಚಿತ್ರಕ್ಕಾಗಿ ಮೆಹರ್‌ಶಾಲಾ ಅಲಿ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯನ್ನು ಪಡೆದರು ಹಾಗೂ ಚಿತ್ರವು ಶ್ರೇಷ್ಠ ಮೂಲ ಚಿತ್ರಕತೆ ಪ್ರಶಸ್ತಿಯನ್ನೂ ಪಡೆಯಿತು.

‘ರೋಮಾ’ ಚಿತ್ರದ ನಿರ್ದೇಶಕ ಆಲ್ಫೋನ್ಸೊ ಕ್ವಾರನ್ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಇದೇ ಚಿತ್ರವು ಶ್ರೇಷ್ಠ ವಿದೇಶಿ ಚಿತ್ರ ಮತ್ತು ಶ್ರೇಷ್ಠ ಛಾಯಾಗ್ರಹಣ ಪ್ರಶಸ್ತಿಗಳನ್ನೂ ಗಳಿಸಿದೆ.

‘ಇಫ್ ಬಿಯಲ್ ಸ್ಟ್ರೀಟ್ ಕುಡ್ ಟಾಕ್’ ಚಿತ್ರದಲ್ಲಿನ ಅಭಿನಯಕ್ಕಾಗಿ ರೆಜಿನಾ ಕಿಂಗ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

‘ದ ಫೇವರಿಟ್’ ಚಿತ್ರದ ಕ್ವೀನ್ ಆ್ಯನ್ ಪಾತ್ರಕ್ಕಾಗಿ ಒಲಿವಿಯ ಕೋಲ್ಮನ್ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಅದೇ ವೇಳೆ, ‘ಬೊಹೇಮಿಯನ್ ರ್ಯಾಪ್ಸಡಿ’ ಚಿತ್ರದಲ್ಲಿ ಫ್ರೆಡ್ಡೀ ಮರ್ಕ್ಯುರಿಯ ಪಾತ್ರವನ್ನು ನಿಭಾಯಿಸಿದ ರಮಿ ಮಲಿಕ್ ಶ್ರೇಷ್ಠ ನಟ ಪ್ರಶಸ್ತಿಯನ್ನು ಗಳಿಸಿದ್ದಾರೆ. ಈ ಚಿತ್ರವು ಧ್ವನಿ ಮತ್ತು ಸಂಕಲನ ಪ್ರಶಸ್ತಿಗಳನ್ನೂ ಗಳಿಸಿಕೊಂಡಿದೆ.

ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ‘ಬ್ಲಾಕ್ ಪ್ಯಾಂಥರ್’ ಚಿತ್ರವು ಶ್ರೇಷ್ಠ ಮೂಲ ಸಂಗೀತ, ಶ್ರೇಷ್ಠ ವಸ್ತ್ರ ವಿನ್ಯಾಸ ಮತ್ತು ಶ್ರೇಷ್ಠ ನಿರ್ಮಾಣ ವಿನ್ಯಾಸ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

‘ಎ ಸ್ಟಾರ್ ಈಸ್ ಬಾರ್ನ್’ ಚಿತ್ರದ ಹಾಡು ‘ಶ್ಯಾಲೋ’ ಶ್ರೇಷ್ಠ ಮೂಲ ಹಾಡು ಪ್ರಶಸ್ತಿಯನ್ನು ಗಳಿಸಿದೆ. ಈ ಹಾಡನ್ನು ಹಾಡಿದವರು ಲೇಡಿ ಗಾಗಾ ಮತ್ತು ಬ್ರಾಡ್ಲಿ ಕೂಪರ್.

ಶ್ರೇಷ್ಠ ಕಿರು ಸಾಕ್ಷಚಿತ್ರ ಪ್ರಶಸ್ತಿಯನ್ನು ಭಾರತೀಯ ಗುನೀತ್ ಮೊಂಗ ಅವರ ‘ಪೀರಿಯಡ್. ಎಂಡ್ ಆಫ್ ಸೆಂಟನ್ಸ್’ ಎಂಬ ಚಿತ್ರ ಗಳಿಸಿದೆ.

► ನಿರೂಪಕರಿಲ್ಲದ ಪ್ರಶಸ್ತಿ ಪ್ರದಾನ

ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನವು ನಿರೂಪಕರಿಲ್ಲದೆ ವಿವಾದಕ್ಕೊಳಗಾಯಿತು. ಅಮೆರಿಕದ ನಟ ಹಾಗೂ ಹಾಸ್ಯಗಾರ ಕೆವಿನ್ ಹಾರ್ಟ್ ಈ ಬಾರಿಯ ಆಸ್ಕರ್ ಪ್ರಶಸ್ತಿಯ ನಿರೂಪಕರಾಗಿ ಆಯ್ಕೆಯಾಗಿದ್ದರು.

ಆದರೆ, ಕೆಲವು ವರ್ಷಗಳ ಹಿಂದೆ ಸಲಿಂಗಿಗಳ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿ ಅವರು ಮಾಡಿದ್ದ ಟ್ವೀಟ್‌ಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ, ನಿರೂಪಕ ಸ್ಥಾನಕ್ಕೆ ಅವರ ಅರ್ಹತೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಯಿತು.

ಈ ಹಿನ್ನೆಲೆಯಲ್ಲಿ, ಕಳೆದ ವರ್ಷದ ಡಿಸೆಂಬರ್ 7ರಂದು ಅವರು ಆಸ್ಕರ್ಸ್‌ ನಿರೂಪಕ ಸ್ಥಾನದಿಂದ ಹಿಂದೆ ಸರಿದಿದ್ದರು.

ಬಳಿಕ ಯಾರನ್ನೂ ಆ ಸ್ಥಾನಕ್ಕೆ ನೇಮಿಸಲಾಗಿಲ್ಲ.

► ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ

ಶ್ರೇಷ್ಠ ಚಿತ್ರ: ಗ್ರೀನ್ ಬುಕ್

ಶ್ರೇಷ್ಠ ನಿರ್ದೇಶಕ: ಆಲ್ಫೋನ್ಸೊ ಕ್ವಾರನ್ (ರೋಮಾ)

ಶ್ರೇಷ್ಠ ನಟಿ: ಒಲಿವಿಯಾ ಕೋಲ್ಮನ್ (ದ ಫೇವರೆಟ್)

ಶ್ರೇಷ್ಠ ನಟ: ರಮಿ ಮಲಿಕ್ (ಬೊಹೇಮಿಯನ್ ರ್ಯಾಪ್ಸಡಿ)

ಶ್ರೇಷ್ಠ ಪೋಷಕ ನಟಿ: ರೆಜಿನಾ ಕಿಂಗ್ (ಇಫ್ ಬಿಯಲ್ ಸ್ಟ್ರೀಟ್ ಕುಡ್ ಟಾಕ್)

ಶ್ರೇಷ್ಠ ಪೋಷಕ ನಟ: ಮೆಹರ್‌ಶಾಲ ಅಲಿ (ಗ್ರೀನ್ ಬುಕ್)

ಶ್ರೇಷ್ಠ ವಿದೇಶಿ ಚಿತ್ರ: ರೋಮಾ (ಮೆಕ್ಸಿಕೊ)

ಶ್ರೇಷ್ಠ ಆ್ಯನಿಮೇಟೆಡ್ ಚಿತ್ರ: ಸ್ಪೈಡರ್‌ಮ್ಯಾನ್: ಇಂಟು ದ ಸ್ಪೈಡರ್-ವರ್ಸ್

ಶ್ರೇಷ್ಠ ಮೂಲ ಚಿತ್ರಕತೆ: ಗ್ರೀನ್ ಬುಕ್

ಶ್ರೇಷ್ಠ ಸುಧಾರಿತ ಚಿತ್ರಕತೆ: ಬ್ಲಾಕ್‌ ಕ್ಲಾನ್ಸ್‌ ಮನ್

ಶ್ರೇಷ್ಠ ಮೂಲ ಸಂಗೀತ: ಬ್ಲಾಕ್ ಪ್ಯಾಂಥರ್

ಶ್ರೇಷ್ಠ ಮೂಲ ಹಾಡು: ಶ್ಯಾಲೋ (ಎ ಸ್ಟಾರ್ ಈಸ್ ಬಾರ್ನ್)

ಶ್ರೇಷ್ಠ ಸಾಕ್ಷಚಿತ್ರ ಫೀಚರ್: ಫ್ರೀ ಸೋಲೋ

ಶ್ರೇಷ್ಠ ಸಾಕ್ಷಚಿತ್ರ ಕಿರು: ಪೀರಿಯಡ್.ಎಂಡ್ ಆಫ್ ಸೆಂಟನ್ಸ್

ಶ್ರೇಷ್ಠ ಛಾಯಾಗ್ರಹಣ: ಆಲ್ಫೋನ್ಸೊ ಕ್ವಾರನ್ (ರೋಮಾ)

ಶ್ರೇಷ್ಠ ವಿಶುವಲ್ ಇಫೆಕ್ಟ್ಸ್: ಫಸ್ಟ್ ಮ್ಯಾನ್

ಶ್ರೇಷ್ಠ ಸಂಕಲನ: ಬೊಹೇಮಿಯನ್ ರ್ಯಾಪ್ಸಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News