ಪಾರ್ಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ 7 ವರ್ಷದ ಬಾಲಕ ಮೃತ್ಯು
ಬೆಂಗಳೂರು, ಫೆ.25: ನಗರದ ಪಾರ್ಕ್‌ವೊಂದರಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ, ಮೃತಪಟ್ಟಿರುವ ಘಟನೆ ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಗ್ರೇಪ್‌ಗಾರ್ಡನ್ ನಿವಾಸಿ ನಾಗರಾಜ್ ಮತ್ತು ಗೌರಿ ದಂಪತಿ ಪುತ್ರ ಉದಯ್(7) ಮೃತಪಟ್ಟ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿನ ರಾಜ್‌ಕುಮಾರ್ ಪಾರ್ಕ್‌ಗೆ ಬಾಲಕನನ್ನು ಕರೆದುಕೊಂಡು ರವಿವಾರ ಸಂಜೆ ಪೋಷಕರು ಹೋಗಿದ್ದರು. ಈ ವೇಳೆ 7 ಗಂಟೆ ಸಮಯದಲ್ಲಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದಾಗ ಲೈಟಿಂಗ್ ಕಂಬಕ್ಕೆ ಅಳವಡಿಸಲಾಗಿದ್ದ ವೈರ್ ತಗುಲಿ ವಿದ್ಯುತ್ ಹರಿದು ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆ ಕುರಿತು ಪೋಷಕರು, ಸ್ಥಳೀಯರ ನಿವಾಸಿಗಳು ಬಿಬಿಎಂಪಿ ಹಾಗೂ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಚಿವರ ಭೇಟಿ: 10 ಲಕ್ಷ ಪರಿಹಾರ
ಬಾಣಸವಾಡಿ ರಾಜಕುಮಾರ್ ಉದ್ಯಾನವನದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮತಪಟ್ಟ ಬಾಲಕನ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಘಟನಾ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಹಾಗೂ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಪರಿಶೀಲಿಸಿ, ಪೋಷಕರಿಗೆ ಸಾಂತ್ವನ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗಂಗಾಂಬಿಕೆ, 2016ರಲ್ಲಿ ಈ ಪಾರ್ಕ್ ಅನ್ನು ಬಿಡಿಎ ನಿರ್ವಹಿಸಿತ್ತು. ಇತ್ತೀಚೆಗಷ್ಟೇ ಬಿಬಿಎಂಪಿ ಸುಪರ್ದಿಗೆ ಸೇರಿಸಲಾಗಿದೆ. ಪಾಲಿಕೆಗೆ ವರ್ಗಾಯಿಸುವಾಗ ಹೊಸ ವಿದ್ಯುತ್ ಕನೆಕ್ಷನ್ ನೀಡಲಾಗಿದೆ. ಆ ವೇಳೆ ಹಳೆ ವೈರ್‌ಗಳನ್ನು ತೆಗೆದಿಲ್ಲ ಎಂದರು.