×
Ad

"ಎಸ್ಸಿ-ಎಸ್ಟಿ ಮುಂಭಡ್ತಿ ಆದೇಶ ಶೀಘ್ರ ಜಾರಿಗೆ ತರದಿದ್ದರೆ ದೇವೇಗೌಡರ ಕುಟುಂಬಸ್ಥರಿಗೆ ತಕ್ಕ ಪಾಠ"

Update: 2019-02-25 18:53 IST

ಬೆಂಗಳೂರು, ಫೆ.25: ಎಸ್ಸಿ-ಎಸ್ಟಿ ನೌಕರಿ ಮುಂಭಡ್ತಿ ಆದೇಶವನ್ನು ಶೀಘ್ರವಾಗಿ ಹೊರಡಿಸದಿದ್ದರೆ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಸ್ಥರಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ಕಳೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಎಸ್ಸಿ-ಎಸ್ಟಿ ಸರಕಾರಿ ನೌಕರರಿಗೆ ಮೀಸಲಾತಿ ಆಧಾರದ ಮೇಲೆ ಹಿಂಭಡ್ತಿ ಆದೇಶ ವಾಪಸ್ಸು ಪಡೆಯಬೇಕು. ಇಲ್ಲದಿದ್ದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ದಲಿತರು ಮತ ಚಲಾಯಿಸಿ, ದೇವೇಗೌಡರ ಕುಟುಂಬಸ್ಥರನ್ನು ಸೋಲಿಸುವುದಾಗಿ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ಅನಾವಶ್ಯಕವಾಗಿ ಮುಂಭಡ್ತಿ ಆದೇಶವನ್ನು ಹೊರಡಿಸಲು ವಿಳಂಬ ಮಾಡುತ್ತಿದ್ದಾರೆ. ಇನ್ನು ಸಚಿವ ಸಂಪುಟ ಸಭೆಯಲ್ಲಿ ಸಕಾರಾತ್ಮಕ ಆದೇಶವನ್ನು ಹೊರಡಿಸಬೇಕು ಎಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದ್ದರೆ ತಕ್ಷಣವೇ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಒತ್ತಾಯಿಸಿದರು.

ಜನವರಿ ತಿಂಗಳಿನಲ್ಲಿ ಸಚಿವ ಸಂಪುಟ ಕೈಗೊಂಡ ನಿರ್ಣಯವನ್ನು ಜಾರಿ ಮಾಡಿ ಎಲ್ಲ ಹಿಂಭಡ್ತಿಗಳನ್ನು ರದ್ದು ಪಡಿಸಿ ಜೇಷ್ಠತಾ ಪಟ್ಟಿಗಳನ್ನು ಪುನರ್ ಅವಲೋಕಿಸಿ ಪ್ರಕಟಿಸುವ ಬದಲು ಸಂಬಂಧವೇ ಇಲ್ಲದ 1999ರ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವ ಆದೇಶಗಳನ್ನು ಅನಾವಶ್ಯಕವಾಗಿ ಸೇರ್ಪಡೆಗೊಳಿಸುವ ಮೂಲಕ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರದ ಮುಖ್ಯ ಕಾರ್ಯದರ್ಶಿ ಅವರು ಸಿದ್ಧಪಡಿಸಿರುವ ಕರಡು ಆದೇಶದಲ್ಲಿ ಎಲ್ಲ ಎಸ್ಸಿ-ಎಸ್ಟಿ 3,799 ಭಡ್ತಿಗಳ ಹುದ್ದೆಗಳನ್ನು ಸೂಪರ್ ನ್ಯೂಮರರಿ ಹುದ್ದೆ ಎಂದು ಕಾಯ್ದೆಗೆ ವಿರುದ್ಧವಾಗಿ ಪರಿಗಣಿಸುವ ಪ್ರಯತ್ನವು ನಡೆದಿದೆ ಎಂದ ಅವರು, ಬಿ.ಕೆ. ಪವಿತ್ರ ಪ್ರಕರಣದಲ್ಲಿ ಪರಿಷ್ಕರಿಸಿರುವ ಎಲ್ಲ ಜೇಷ್ಠತೆಗಳು ರದ್ದಾಗಿದ್ದು, ಈ ಜೇಷ್ಠತೆ ಮೇಲೆ ನೀಡಿರುವ ಎಲ್ಲ ಹಿಂಭಡ್ತಿ ಮತ್ತು ಮುಂಭಡ್ತಿಗಳನ್ನು ರದ್ದು ಪಡಿಸಬೇಕು. ಹಿಂಭಡ್ತಿ ಹೊಂದಿದ್ದ ಅಧಿಕಾರಿ ಮತ್ತು ನೌಕರರ ಹಿಂಭಡ್ತಿ ಆದೇಶಗಳನ್ನು ಅದೇ ದಿನಾಂಕದಿಂದ ಪೂರ್ವ ಅನ್ವಯವಾಗಿ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.

ಎಲ್ಲ ಹಿಂಭಡ್ತಿ ಆದೇಶಗಳನ್ನು ವಾಪಸ್ಸು ಪಡೆದ ನಂತರ ಕಾಯ್ದೆಯ 5ನೇ ಅಂಶದಲ್ಲಿರುವಂತೆ ಜೇಷ್ಠತಾ ಪಟ್ಟಿಗಳನ್ನು ಪುನರ್ ಅವಲೋಕಿಸಿ ಪ್ರಕಟಿಸದಿದ್ದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಆರ್.ಮೋಹನ್‌ರಾಜ್, ಗುರು ಪ್ರಸಾದ್ ಕೆರಗೋಡು, ಗೋಪಾಲ ಕೃಷ್ಣ ಅರಳಹಳ್ಳಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News