ದೌರ್ಜನ್ಯ, ಅಕ್ರಮ ನ್ಯಾಯಾಂಗ ಬಂಧನ ಆರೋಪ: ಇನ್ಸ್‌ಪೆಕ್ಟರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ

Update: 2019-02-26 13:14 GMT

ಬೆಂಗಳೂರು, ಫೆ.26: ದಲಿತ ಸಂಘರ್ಷ ಸಮಿತಿ ಪದಾಧಿಕಾರಿಯ ಮೇಲೆ ದೌರ್ಜನ್ಯ ನಡೆಸಿ ಅಕ್ರಮ ನ್ಯಾಯಾಂಗ ಬಂಧನದಲ್ಲಿರಿಸಿದ ಆರೋಪ ಹೊತ್ತಿರುವ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಡ್ವಿನ್ ಪ್ರದೀಪ್ ಸೇರಿದಂತೆ ಪ್ರಮುಖರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಪೊಲೀಸ್ ಅಧಿಕಾರಿಗಳ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ದಸಂಸ ಸಮಿತಿ ಕಾರ್ಯಕರ್ತರು ಕಾಡುಗೊಂಡನಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಪದಾಧಿಕಾರಿ ಪಾರ್ಥಿಬನ್ ಮೇಲೆ ಹಲ್ಲೆ ನಡೆಸಿ ಸುಳ್ಳು ಆರೋಪದಡಿ ಬಂಧಿಸಿರುವ ಕಾಡುಗೊಂಡನಹಳ್ಳಿ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸಮಿತಿ ಪದಾಧಿಕಾರಿಯಾದ ಪಾರ್ಥಿಬನ್ ಅವರ ಮೇಲೆ ದೌರ್ಜನ್ಯ ಎಸಗಿ ಸುಳ್ಳು ಆರೋಪದಡಿ ಬಂಧಿಸಿರುವ ಕಾಡುಗೊಂಡನಹಳ್ಳಿ ಇನ್ಸ್‌ಪೆಕ್ಟ್‌ರ್ ಎಡ್ವಿನ್ ಪ್ರದೀಪ್, ಸಬ್‌ಇನ್ಸ್‌ಪೆಕ್ಟರ್ ಆನಂದ್ ಕುಕ್ಕಣನವರ ಹಾಗೂ ಪೇದೆಗಳಾದ ರವಿ ಮತ್ತು ಯಾಸೀನ್ ಅವರನ್ನು ಕರ್ತವ್ಯದಿಂದ ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನ್ವಯ ಮೇಲ್ಕಂಡ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತಾಗಬೇಕು. ಅಲ್ಲದೆ, ಠಾಣೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆಯನ್ನು ನಿಯಮ ಬದ್ಧವಾಗಿ ಕರೆಯಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News