ಎರಡನೇ ಹಂತದ ಮೆಟ್ರೋ: 216 ರೈಲು ಬೋಗಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭ

Update: 2019-02-26 13:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.26: ಎರಡನೇ ಹಂತದ ‘ನಮ್ಮ ಮೆಟ್ರೋ’ ಯೋಜನೆಗೆ ಅಗತ್ಯವಿರುವ 216 ಬೋಗಿಗಳ ಖರೀದಿಗೆ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದ್ದು, ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ತಿ ಮಾಡುವ ಗುರಿ ನೀಡಲಾಗಿದೆ.

72 ಕಿ.ಮೀ. ಉದ್ದದ ಎರಡನೇ ಹಂತದ ಯೋಜನೆಯಲ್ಲಿ ಕಾರ್ಯಾಚರಿಸಲು 216 ಬೋಗಿಗಳನ್ನು (6 ಬೋಗಿಯ 36 ರೈಲುಗಳು) ಖರೀದಿಸಲಾಗುತ್ತಿದೆ. ಒಂದನೇ ಹಂತದಲ್ಲಿ ಮೂರು ಬೋಗಿಯ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿಸಲು ಬಿಇಎಂಎಲ್‌ನಿಂದ 150 ಬೋಗಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಬೋಗಿಗೆ 10 ಕೋಟಿ ರೂ. ಅಂದಾಜು ವೆಚ್ಚವೆಂದು ಲೆಕ್ಕ ಹಾಕಲಾಗಿದೆ. ಎರಡನೇ ಹಂತದಲ್ಲೂ ಇದೇ ವೆಚ್ಚವನ್ನು ಪರಿಗಣಿಸಿ ಬೋಗಿ ಖರೀದಿ ನಡೆಯಲಿದೆ. ಮೈಸೂರು ರಸ್ತೆಯ ನಾಯಂಡಹಳ್ಳಿ-ಕೆಂಗೇರಿ ಹಾಗೂ ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್ ಮಾರ್ಗಗಳು ಮೊದಲು ಸಂಚಾರಕ್ಕೆ ಮುಕ್ತವಾಗುತ್ತವೆ. ಕೆಂಗೇರಿವರೆಗಿನ ಕಾಮಗಾರಿ ಶೇ.80 ರಷ್ಟು ಮುಗಿದಿದೆ. ಇನ್ನು ಕನಕ ಪುರ ರಸ್ತೆಯ ಕಾಮಗಾರಿ ಶೇ.75 ರಷ್ಟು ಪೂರ್ಣವಾಗಿದೆ. 2020-2021ರಲ್ಲಿ ಈ ಮಾರ್ಗಗಳಲ್ಲಿ ರೈಲು ಸೇವೆ ಆರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಬೋಗಿಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಕಡಿಮೆ ದರ ಹಾಗೂ ಉತ್ತಮ ತಂತ್ರಜ್ಞಾನ ಹೊಂದಿರುವ ಬೋಗಿಗಳನ್ನು ಉತ್ಪಾದಿಸುವ ಕಂಪನಿ ಜತೆ ಒಪ್ಪಂದ ನಡೆದ ಬಳಿಕ ಹಂತಹಂತವಾಗಿ ಬೋಗಿ ಪಡೆಯಲಾಗುತ್ತದೆ. 3 ವರ್ಷ 11 ತಿಂಗಳಲ್ಲಿ ಎಲ್ಲ ಬೋಗಿಗಳನ್ನು ಪೂರೈಸುವಂತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಮೇನಲ್ಲಿ ಟೆಂಡರ್ ಮುಕ್ತಾಯ: ಬೋಗಿಗಳ ಖರೀದಿಗೆ ಸಂಬಂಧಿಸಿದಂತೆ ಮೇ ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ನಂತರ ಅರ್ಜಿಗಳನ್ನು ಪರಿಶೀಲಿಸಿ ಕಡಿಮೆ ದರದಲ್ಲಿ ಬೋಗಿ ಪೂರೈಸುವ ಕಂಪನಿಯನ್ನು ಆರಿಸಲಾಗುತ್ತದೆ. ಎರಡನೇ ಹಂತದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಮತ್ತಷ್ಟು ಬೋಗಿಗಳ ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ.

ಮೊದಲ ಹಂತದ ರೈಲುಗಳ ಬಳಕೆ: ಎರಡನೇ ಹಂತದ ಮಾರ್ಗಗಳು ಸಂಚಾರಕ್ಕೆ ಮುಕ್ತವಾದ ಬಳಿಕ ಬೋಗಿಗಳ ಹಸ್ತಾಂತರ ತಡವಾದರೆ ಮೊದಲನೇ ಹಂತದ ರೈಲುಗಳನ್ನೇ ಬಳಸಿಕೊಳ್ಳಲು ಚಿಂತಿಸಲಾಗಿದೆ. ಅದರ ಭಾಗವಾಗಿ ನಾಯಂಡಹಳ್ಳಿ-ಕೆಂಗೇರಿ ಮಾರ್ಗವು ಮೈಸೂರು ರಸ್ತೆ ನಿಲ್ದಾಣದ ಮುಂದುವರಿದ ಭಾಗವಾಗಲಿದೆ. ಬೈಯ್ಯಪ್ಪನಹಳ್ಳಿ ಡಿಪೊದಿಂದ ಹೊರಡುವ ರೈಲುಗಳು ಮೈಸೂರು ರಸ್ತೆ ನಿಲ್ದಾಣದವರೆಗೆ ಕಾರ್ಯಾಚರಿಸುತ್ತಿವೆ. ಹೊಸ ಮಾರ್ಗ ಲೋಕಾರ್ಪಣೆಯಾದ ಬಳಿಕ ರೈಲಿನ ಮಾರ್ಗವೂ ಉದ್ದವಾಗಲಿದೆ. ಈ ರೈಲು ಅದೇ ಮಾರ್ಗದಲ್ಲಿ ವಾಪಸ್ ಬರುವಾಗ ತಡವಾಗುತ್ತದೆ. ಹೀಗಾಗಿ ಹೆಚ್ಚುವರಿ ರೈಲುಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News